"ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ರಾಜಿ ಪ್ರಕ್ರಿಯೆ, ವಿವಾಹವಾಗುವ ಷರತ್ತು ವಿಧಿಸುವಂತಿಲ್ಲ"

Update: 2021-05-31 09:40 GMT

ಹೊಸದಿಲ್ಲಿ :  ಲೈಂಗಿಕ ಅಪರಾಧ ಪ್ರಕರಣದ ಆರೋಪಿಗೆ  ರಾಜಿ ಪ್ರಕ್ರಿಯೆ ನಡೆಸುವ ಅಥವಾ  ಸಂತ್ರಸ್ತೆ ಜತೆ ವಿವಾಹವಾಗಲು ಒಪ್ಪುವ ಷರತ್ತಿನೊಂದಿಗೆ ಜಾಮೀನು ನೀಡುವ ಹಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದೆ.  ಇಂತಹ ಕ್ರಮಗಳಿಂದ ಸಂತ್ರಸ್ತೆಗೆ ನ್ಯಾಯ ಒದಗಿಸಿದಂತಾಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡುವ ಸಂದರ್ಭ ಅಪರ್ಣಾ ಭಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಪರಿಗಣಿಸಬೇಕು ಎಂದೂ ಜಸ್ಟಿಸ್ ಸೌರಭ್ ಶ್ಯಾಮ್ ಶಂಶೆರ್ರಿ ಅವರ ಪೀಠ ಹೇಳಿದೆ.  ಆರೋಪಿಯು ಸಂತ್ರಸ್ತೆಗೆ  ಮಾಡಿರುವ ಕೆಡುಕನ್ನು ಕ್ಷಮಿಸುವ ಅಥವಾ ಕಡಿಮೆಯೆಂದು ತೋರ್ಪಡಿಸುವ ರೀತಿಯ ಷರತ್ತುಗಳು ಸಂತ್ರಸ್ತೆ  ಮತ್ತೊಮ್ಮೆ ಮನೋವೇದನೆಗೆ ಗುರಿಯಾಗುವಂತೆ ಮಾಡಬಹುದು  ಹಾಗೂ ಇಂತಹ  ಷರತ್ತುಗಳನ್ನು ವಿಧಿಸುವಂತಿಲ್ಲ ಎಂದು ಅಪರ್ಣಾ ಭಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

ತೃತೀಯ ಲಿಂಗಿಯೊಬ್ಬನಿಗೆ ತನ್ನ ಜತೆ ಲೈಂಗಿಕ ಸಂಪರ್ಕ ನಡೆಸಲು ಒತ್ತಾಯಿಸಿದ ಆರೋಪ ಹೊತ್ತ ಇಮ್ರಾನ್ ಎಂಬಾತನ ಜಾಮೀನು ಅರ್ಜಿಯನ್ನು ಅಲಹಾಹಾದ್ ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಆರೋಪಿಯ ಜಾಮೀನು ಅಪೀಲನ್ನು ಫಿರೋಝಾಬಾದ್‍ನ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.

ಈ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ ನ್ಯಾಯಾಲಯ ಅಗತ್ಯ ಬಿದ್ದಾಗ ನ್ಯಾಯಾಲಯಕ್ಕೆ ಹಾಜರಾಗುವಂತೆ ಹಾಗೂ ದೊರೆತ ಜಾಮೀನಿನ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸದಂತೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News