'ಡಿಜಿಟಲ್ ಇಂಡಿಯಾ' ಎಂದು ಹೇಳುವ ನಿಮಗೆ ತಳಮಟ್ಟದ ವಾಸ್ತವತೆಗಳು ತಿಳಿದಿಲ್ಲ: ಕೇಂದ್ರಕ್ಕೆ ಜಸ್ಟಿಸ್ ಚಂದ್ರಚೂಡ್‌ ಚಾಟಿ

Update: 2021-05-31 11:34 GMT

ಹೊಸದಿಲ್ಲಿ : "ನೀವು ಡಿಜಿಟಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದ್ದೀರಿ. ಆದರೆ ನಿಮಗೆ ತಳಮಟ್ಟದ ವಾಸ್ತವತೆಗಳು ತಿಳಿದಿಲ್ಲ. ಜಾರ್ಖಂಡ್‍ನ ಒಬ್ಬ ಬಡ ಕಾರ್ಮಿಕ ಕೋವಿಡ್ ಲಸಿಕೆ ಪಡೆಯಲು ನೋಂದಣಿಗಾಗಿ  ಯಾವುದಾದರೂ ಕಾಮನ್ ಸೆಂಟರ್ ಗೆ ಹೋಗಬೇಕೇ?" ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ  ತಂದೊಡ್ಡಿದ ಸಮಸ್ಯೆಗಳ ಕುರಿತಂತೆ ಸ್ವಯಂಪ್ರೇರಿತ ಪ್ರಕರಣವೊಂದರ ವಿಚಾರಣೆಯನ್ನು ಚಂದ್ರಚೂಡ್ ಹೊರತಾಗಿ ಜಸ್ಟಿಸ್ ಎಲ್ ನಾಗೇಶ್ವರ ರಾವ್ ಹಾಗೂ ಜಸ್ಟಿಸ್ ಎಸ್ ರವೀಂದ್ರ ಭಟ್ ಅವರ ನ್ಯಾಯಪೀಠ ನಡೆಸುತ್ತಿರುವ ವೇಳೆ ಮೇಲಿನ ಪ್ರಶ್ನೆಯನ್ನು ಎತ್ತಲಾಯಿತು.

ದೇಶದ ನಾಗರಿಕರಿಗೆ ನೀಡಲಾಗುತ್ತಿರುವ ಲಸಿಕೆ ಹಾಗೂ ಡೋಸ್‍ಗಳ  ಕುರಿತು ಎಲ್ಲಾ ವಿವರಗಳು ಇರುವಂತೆ ಮಾಡುವ ಸಲುವಾಗಿ ಆನ್‍ಲೈನ್ ನೋಂದಣಿ ಅಗತ್ಯವಿದೆ ಎಂದು ಕೇಂದ್ರ ತನ್ನ ಅಫಿಡವಿಟ್‍ನಲ್ಲಿ ಹೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟಿಸ್ ಚಂದ್ರಚೂಡ್ "ನಾವೇನೂ ನೀತಿ ರೂಪಿಸುತ್ತಿಲ್ಲ. ನೀವು ಕೇಂದ್ರ ಸರಕಾರವಾಗಿರುವುದರಿಂದ ಯಾವುದು ಸರಿ ಎಂದು ನಿಮಗೆ ತಿಳಿದಿದೆ ಎಂದು ನೀವು ಹೇಳುವ ಹಾಗಿಲ್ಲ" ಎಂದು ಹೇಳಿದರು.

"ಆನ್‍ಲೈನ್ ನೋಂದಣಿ ಖಂಡಿತ ಸರಿ, ಆದರೆ ದೇಶದಲ್ಲಿರುವ ಡಿಜಿಟಲ್ ಡಿವೈಡ್ ಬಗ್ಗೆ ಏನಂತೀರಿ? ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವ ವಲಸಿಗ ಕಾರ್ಮಿಕರು  ಏನು ಮಾಡಬೇಕು? ನಾವೇನೂ ನೀತಿ ಬದಲಾಯಿಸುವುದಿಲ್ಲ, ನೀವು ದಯವಿಟ್ಟು ಎದ್ದು  ಕಾಫಿಯ ಪರಿಮಳವನ್ನು ಹೀರಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕಣ್ತೆರೆದು ನೋಡಬೇಕು" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News