'ಪವಾಡಕರ' ಆಯುರ್ವೇದ ಔಷಧಿ ಪಡೆದು ಕೋವಿಡ್‍ನಿಂದ ಗುಣಮುಖನಾದೆ ಎಂದು ಹೇಳಿದ್ದ ವ್ಯಕ್ತಿ ಸಾವು
ಹೈದರಾಬಾದ್: 'ಪವಾಡಕರ' ಆಯುರ್ವೇದ ಔಷಧಿ ಸೇವಿಸಿದ ಕೆಲವೇ ನಿಮಿಷಗಳಲ್ಲಿ ತಾನು ಕೋವಿಡ್ ಸೋಂಕಿನಿಂದ ಗುಣಮುಖನಾದೆ ಎಂದು ಹೇಳಿಕೊಂಡಿದ್ದ ನಿವೃತ್ತ ಹೆಡ್ ಮಾಸ್ಟರ್ ಒಬ್ಬರು ಸೋಮವಾರ ನೆಲ್ಲೂರಿನ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೋಟಯ್ಯ ಎಂಬ ಹೆಸರಿನ ಈ ವ್ಯಕ್ತಿಯ ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ ಶುಕ್ರವಾರ ರಾತ್ರಿ ಕುಸಿದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾನು ಆಯುರ್ವೇದ ಔಷಧಿ ಸೇವಿಸಿ ಕೋವಿಡ್‍ನಿಂದ ಶೀಘ್ರ ಗುಣಮುಖನಾದೆ ಎಂದು ಈತ ಹೇಳುತ್ತಿದ್ದ ವೀಡಿಯೋ ಕೆಲ ದಿನಗಳ ಹಿಂದಷ್ಟೇ ವೈರಲ್ ಆಗಿತ್ತು.
ಕೃಷ್ಣಾಪಟ್ಣಂನ ಬೋನಿಗಿ ಆನಂದಯ್ಯ ಅವರು ತಯಾರಿಸಿದ್ದ ಔಷಧೀಯ ಕಣ್ಣಿನ ಡ್ರಾಪ್ಸ್ ಪಡೆದ ನಂತರ ತಾನು ಗುಣಮುಖನಾದೆ ಎಂದು ಈ ವ್ಯಕ್ತಿ ಹೇಳಿದ ನಂತರ ಈ ಔಷಧಿ ಪಡೆಯಲು ಸಾವಿರಾರು ಜನರು ಕೃಷ್ಣಾಪಟ್ಣಂ ಗ್ರಾಮಕ್ಕೆ ಇತ್ತೀಚೆಗೆ ದೌಡಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಪವಾಡ ಔಷಧಿ ತಯಾರಿಸುವ ಬೋನಿಗಿ ಆನಂದಯ್ಯ ತಂಡದ ಕನಿಷ್ಠ ಮೂವರು ಸದಸ್ಯರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.