2020-21ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.7.3ರಷ್ಟು ಕುಗ್ಗುವ ನಿರೀಕ್ಷೆ
ಹೊಸದಿಲ್ಲಿ,ಮೇ 31: ಈ ವರ್ಷದ ಮಾ.31ಕ್ಕೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರವು ಶೇ.1.6ರಷ್ಟಿದೆ. ಆದರೆ 2019-20ನೇ ಸಾಲಿನ ಶೇ.4ಕ್ಕೆ ಹೋಲಿಸಿದರೆ 2020-21ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಮೈನಸ್ ಶೇ.7.3ರಷ್ಟಕ್ಕೆ ಕುಗ್ಗುವ ನಿರೀಕ್ಷೆಯಿದ್ದು,ಇದು ಕಳೆದ 40 ವರ್ಷಗಳಲ್ಲಿ ಮೊದಲ ವಾರ್ಷಿಕ ಆರ್ಥಿಕ ಸಂಕುಚನವಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಜಾರಿ ಸಚಿವಾಲಯವು ಸೋಮವಾರ ಬಿಡುಗಡೆಗೊಳಿಸಿರುವ ದತ್ತಾಂಶಗಳು ತೋರಿಸಿವೆ.
2021,ಜ.29ರಂದು ಬಿಡುಗಡೆಗೊಳಿಸಿದ್ದ 2019-20ನೇ ಸಾಲಿನ ಮೊದಲ ಪರಿಷ್ಕೃತ ಜಿಡಿಪಿ ಅಂದಾಜು 145.69 ಲ.ಕೋ.ರೂ.ಗೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ಜಿಡಿಪಿಯು 135.13 ಲ.ಕೋ.ರೂ.ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ರಾಷ್ಟಾದ್ಯಂತ ಕಟ್ಟುನಿಟ್ಟಿನ ಲಾಕ್ಡೌನ್ನಿಂದಾಗಿ ಸತತ ಎರಡು ತ್ರೈಮಾಸಿಕಗಳಲ್ಲಿ ಆರ್ಥಿಕತೆಯು ಸಂಕುಚನಗೊಳ್ಳುವುದರೊಂದಿಗೆ ಭಾರತವು ತನ್ನ ಮೊದಲ ತಾಂತ್ರಿಕ ಹಿನ್ನಡೆಯನ್ನು ಅನುಭವಿಸಿದೆ. 2020-21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ.24.4 ರಷ್ಟು ಅಭೂತಪೂರ್ವ ಕುಸಿತವನ್ನು ದಾಖಲಿಸಿತ್ತು. ಆದರೆ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚುವುದರೊಂದಿಗೆ ಜಿಡಿಪಿ ಕುಸಿತವು ಶೇ.7.3ಕ್ಕೆ ಸೀಮಿತಗೊಂಡಿತ್ತು. 2020 ಡಿಸೆಂಬರ್ 31ಕ್ಕೆ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ.0.4ರಷ್ಟು ಬೆಳವಣಿಗೆ ದರವನ್ನು ದಾಖಲಿಸಿತ್ತು.
ಕೋವಿಡ್ ಎರಡನೇ ಅಲೆಯನ್ನು ಭಾರತವು ಎಷ್ಟು ಬೇಗ ನಿಯಂತ್ರಿಸುತ್ತದೆ ಎನ್ನುವುದನ್ನು ದೇಶದ ಆರ್ಥಿಕತೆಯ ಬೆಳವಣಿಗೆಯು ಈಗ ಅವಲಂಬಿಸಿದೆ ಎಂದು ಆರ್ಬಿಐ ಇತ್ತೀಚಿನ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ತನ್ಮಧ್ಯೆ ದೇಶದಲ್ಲಿ ನಿರುದ್ಯೋಗ ದರವು ಮೇ 23ಕ್ಕೆ ಅಂತ್ಯಗೊಂಡ ವಾರದಲ್ಲಿ ಸುಮಾರು ಒಂದು ವರ್ಷದ ಗರಿಷ್ಠ ಮಟ್ಟವಾದ ಶೇ.14.73ಕ್ಕೇರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ತಿಳಿಸಿದೆ.