ಆಸ್ಪತ್ರೆಯ ಮುಂದೆ ಮೃತ ಮಗುವನ್ನು ಕೈಯಲ್ಲಿ ಹಿಡಿದು ಗೋಗರೆದ ತಂದೆ: ವೀಡಿಯೋ ವೈರಲ್

Update: 2021-05-31 16:58 GMT

ಲಕ್ನೊ, ಮೇ 31: ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ ಸರಕಾರಿ ಆಸ್ಪತ್ರೆಯ ಹೊರಭಾಗದಲ್ಲಿ ವ್ಯಕ್ತಿಯೊಬ್ಬ ತನ್ನ 5 ತಿಂಗಳ ಮಗುವನ್ನು ಕೈಗಳಲ್ಲಿ ಎತ್ತಿಕೊಂಡು ನಿಂತಿರುವ ದೃಶ್ಯದ ವೀಡಿಯೊ ವೈರಲ್ ಆಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ತಂದರೂ, 2 ಗಂಟೆಯವರೆಗೆ ಯಾವುದೇ ವೈದ್ಯರು ಗಮನಿಸದ ಕಾರಣ ಮಗು ಮೃತಪಟ್ಟಿದೆ ಎಂದು ವ್ಯಕ್ತಿ ಆರೋಪಿಸಿದ್ದಾನೆ ಎಂದು ವರದಿಯಾಗಿದೆ.

ಮಗುವನ್ನು ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿತ್ತು. ಆಸ್ಪತ್ರೆಗೆ ತಂದೊಡನೆ ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಪರೀಕ್ಷಿಸಿದ್ದಾರೆ . ಮಗು ಮನೆಯ ಟೆರೇಸ್ ನಿಂದ ಬಿದ್ದಿದೆ ಎಂದು ಹೆತ್ತವರು ಹೇಳಿದ್ದಾರೆ. ತುರ್ತು ಸೇವಾ ವಿಭಾಗದಲ್ಲಿದ್ದ ವೈದ್ಯರು ಮತ್ತು ಸಿಬಂದಿಗಳು ಮಗುವನ್ನು ಪರೀಕ್ಷಿಸಿದ್ದಾರೆ ಎಂದು ಬಾರಾಬಂಕಿಯ ಮುಖ್ಯ ವೈದ್ಯಾಧಿಕಾರಿ ಬಿಕೆಎಸ್ ಚೌಹಾಣ್ ಹೇಳಿದ್ದಾರೆ.

ಬಾರಾಬಂಕಿ ಜಿಲ್ಲೆಯ ಸಿರೌಲಿ ಗೌಸ್ಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರವಿವಾರ ಸಂಜೆ ಈ ಘಟನೆ ನಡೆದಿದೆ. ಇದೇ ಆಸ್ಪತ್ರೆಯ ಇನ್ನೊಂದು ವಿಭಾಗದಲ್ಲಿ ಕೊರೋನ ಸೋಂಕಿತರ ಚಿಕಿತ್ಸಾ ಕೇಂದ್ರವಿದೆ. ಮಗುವಿನ ಮೃತದೇಹವನ್ನು ಕೈಗಳಲ್ಲಿ ಎತ್ತಿಹಿಡಿದುಕೊಂಡ ವ್ಯಕ್ತಿ ಮತ್ತು ಆತನ ಪತ್ನಿ ಆಸ್ಪತ್ರೆಯ ಗೇಟಿನೆದುರು ಕಾಯುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಇಲ್ಲಿರುವ ಎಲ್ಲರೂ ಕೋವಿಡ್ ಸೋಂಕಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಕೋವಿಡ್ ಭಯದಿಂದ ರೋಗಿಯನ್ನು ಮುಟ್ಟಲೂ ಹೆದರುತ್ತಿದ್ದಾರೆ. ಮಂಚದ ಮೇಲಿಂದ ಕೆಳಬಿದ್ದ ನನ್ನ ಮಗುವಿಗೆ ಚಿಕಿತ್ಸೆ ನೀಡಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಆ ವ್ಯಕ್ತಿ ಅಳಲು ತೋಡಿಕೊಂಡಿದ್ದಾನೆ. 

ಎರಡು ಗಂಟೆಯಾಯಿತು, ಒಬ್ಬ ವೈದ್ಯರೂ ಬಂದಿಲ್ಲ. ತಾಳ್ಮೆಯಿರಲಿ ಎಂದು ಕೆಲವರು ಹೇಳುತ್ತಿದ್ದಾರೆ. ನನ್ನ ಮಗು ಸತ್ತಿದ್ದರೂ ನಾನು ತಾಳ್ಮೆಯಿಂದ ಇರಬೇಕೇ? ಎಂದು ಆತ ಮತ್ತೊಂದು ವೀಡಿಯೊದಲ್ಲಿ ಅಳುಧ್ವನಿಯಿಂದ ಪ್ರಶ್ನಿಸಿದ್ದಾನೆ. ಮೂರನೇ ವೀಡಿಯೊದಲ್ಲಿ, ಸ್ಥಳಕ್ಕೆ ಬಂದ ಕೆಲವು ಪೊಲೀಸರು ಆ ದಂಪತಿಯನ್ನು ಪ್ರಶ್ನಿಸುವ ದೃಶ್ಯವಿದೆ. ಏನು ಈ ನಾಟಕ ಎಂದು ಪೊಲೀಸ್ ಪ್ರಶ್ನಿಸಿದಾಗ ಮಗು ಮೃತಪಟ್ಟಿರುವುದಾಗಿ ದಂಪತಿ ಉತ್ತರಿಸಿದ್ದಾರೆ. ತಾಳ್ಮೆ ವಹಿಸಿ, ದೂರು ಬರೆದುಕೊಡಿ. ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳುವ ದೃಶ್ಯ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News