×
Ad

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸುವ ಆನಂದಯ್ಯರ ಔಷಧಕ್ಕೆ ಆಂಧ್ರ ಸರಕಾರ ಅನುಮತಿ

Update: 2021-05-31 23:49 IST
photo: newindianexpress 

ಅಮರಾವತಿ, ಮೇ 31: ಎಸ್ಪಿಎಸ್ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ನಂ ಗ್ರಾಮದ ಆಯುರ್ವೇದ ವೈದ್ಯ ಬಿ. ಆನಂದಯ್ಯ ಸಿದ್ಧಪಡಿಸಿರುವ ಕೊರೋನ ರೋಗಿಗಳನ್ನು ಪವಾಡಸದೃಶವಾಗಿ ಗುಣಪಡಿಸುತ್ತದೆ ಎಂದು ಹೇಳಲಾಗುತ್ತಿರುವ ಸಾಂಪ್ರದಾಯಿಕ ಔಷಧದ ಬಳಕೆಗೆ ಆಂಧ್ರಪ್ರದೇಶ ಸರಕಾರ ಸೋಮವಾರ ಹಸಿರು ನಿಶಾನೆ ತೋರಿಸಿದೆ. ಆದರೆ, ಕೆಲವೇ ನಿಮಿಷಗಳಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುವ ಕಣ್ಣಿಗೆ ಹಾಕುವ ಔಷಧದ ಬಳಕೆಗೆ ಮಾತ್ರ ಸರಕಾರ ಆನಂದಯ್ಯ ಅವರಿಗೆ ಅನುಮತಿ ನೀಡಿಲ್ಲ. ‌

ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಕುರಿತ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಸರಕಾರ ಮೂರು ಸಾಂಪ್ರದಾಯಿಕ ಔಷಧಗಳನ್ನು ಬಳಸಲು ಅನುಮತಿ ನೀಡಲು ನಿರ್ಧರಿಸಿತು. ಔಷಧ ತನ್ನ ಸಂಯೋಜನೆಯಲ್ಲಿ ವಿಶಿಷ್ಟವಾಗಿದೆ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಆನಂದಯ್ಯ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯಕ್ಕೆ ಆಂಧ್ರಪದೇಶ ಸರಕಾರ ತನ್ನ ನಿರ್ಧಾರವನ್ನು ತಿಳಿಸಿದೆ. 

ತಾನು ಅಭಿವೃದ್ಧಿಪಡಿಸಿದ ಔಷಧವನ್ನು ಮಾರಾಟ ಮಾಡುವ ಉದ್ದೇಶ ಇಲ್ಲ. ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಉದ್ದೇಶ ಇದೆ ಎಂದು ಆನಂದಯ್ಯ ಅವರು ಹೇಳಿದ್ದಾರೆ. ಉಚ್ಚ ನ್ಯಾಯಾಲಯದಲ್ಲಿ ಆನಂದಯ್ಯ ಅವರ ಮನವಿಯ ವಿಚಾರಣೆ ನಡೆಯುತ್ತಿದ್ದರೂ ಕೇಂದ್ರ ಸರಕಾರ ಅನುಮತಿ ನೀಡುವ ನಿರ್ಧಾರಕ್ಕೆ ಬಂದಿದೆ. ಔಷಧ ಸಿದ್ಧಪಡಿಸುವುದನ್ನು ಪ್ರದರ್ಶಿಸದೇ ಇರುವುದರಿಂದ ಇನ್ನೊಂದು ಔಷಧ ಬಳಕೆಗೆ ಸರಕಾರ ಅನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಪತ್ರಿಕಾ ಹೇಳಿಕೆ ತಿಳಿಸಿದೆ. 

ಆಯುರ್ವೇದ ವಿಜ್ಞಾನಗಳ ಸಂಶೋಧನೆಯ ಕೇಂದ್ರ ಮಂಡಳಿಯ ವರದಿ ಆಧಾರದಲ್ಲಿ ‘ಕೃಷ್ಣಪಟ್ನಂ ಔಷಧ’ ಎಂದು ಜನಪ್ರಿಯವಾಗಿರುವ ಔಷಧದ ಬಳಕೆಗೆ ಅನುಮತಿ ನೀಡುವ ನಿರ್ಧಾರವನ್ನು ಆಂಧ್ರಪ್ರದೇಶ ಸರಕಾರ ತೆಗೆದುಕೊಂಡಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News