ದರೋಡೆ ಪ್ರಕರಣದ ಬಿಸಿ ಅನುಭವಿಸುತ್ತಿರುವ ಕೇರಳ ಬಿಜೆಪಿ

Update: 2021-06-01 13:20 GMT

ತಿರುವನಂತಪುರ,ಜೂ.1: ಸುಮಾರು ಎರಡು ತಿಂಗಳುಗಳ ಹಿಂದೆ ತ್ರಿಶೂರು ಜಿಲ್ಲೆಯಲ್ಲಿ ನಡೆದಿದ್ದ ಕಾರಿನ ಅಪಹರಣ ಮತ್ತು ದರೋಡೆ ಪ್ರಕರಣದಲ್ಲಿ ಪೊಲೀಸರಿಂದ ಬಿಜೆಪಿಯ ಏಳು ಪದಾಧಿಕಾರಿಗಳ ವಿಚಾರಣೆಯು ಪಕ್ಷದ ವಿರುದ್ಧದ ಅಕ್ರಮ ಹಣ ವಹಿವಾಟು ಮತ್ತು ಚುನಾವಣಾ ದುರ್ವ್ಯವಹಾರಗಳ ಆರೋಪಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.

ವಿಧಾನಸಭಾ ಚುನಾವಣೆಗಳ ಪ್ರಚಾರ ಅಭಿಯಾನದ ಸಂದರ್ಭದಲ್ಲಿ ಎ.3ರಂದು ಕೋಝಿಕೋಡ್ನಿಂದ ಅಳಪ್ಪುಳಕ್ಕೆ ಹಣವನ್ನು ಸಾಗಿಸುತ್ತಿತ್ತು ಎನ್ನಲಾಗಿರುವ ಕಾರೊಂದನ್ನು ಏಳು ಜನರ ತಂಡವೊಂದು ಅಪಹರಿಸಿತ್ತು. ಹಣವನ್ನು ಸಾಗಿಸುತ್ತಿದ್ದ ಇಬ್ಬರ ಪೈಕಿ ಧರ್ಮರಾಜನ್ ಎಂಬಾತ ಬಿಜೆಪಿ ಪದಾಧಿಕಾರಿ ಎಂದು ಪೊಲೀಸರು ಗುರುತಿಸಿದ್ದಾರೆ.

ಆದರೆ ಈ ಬಗ್ಗೆ ದೂರು ದಾಖಲಾಗಿದ್ದು ಎ.7ರಂದು,ಅಂದರೆ ವಿಧಾನಸಭಾ ಚುನಾವಣೆಗಳು ಮುಗಿದ ಒಂದು ದಿನದ ಬಳಿಕ. ತಾವು ಕಾರಿನಲ್ಲಿ ಸಾಗಿಸುತ್ತಿದ್ದ 25 ಲ.ರೂ.ಗಳನ್ನು ಅಪಹರಣಕಾರರು ದರೋಡೆ ಮಾಡಿದ್ದಾರೆ ಎಂದು ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿ ಶಮಜೀರ್ ಎಂಬಾತ ತ್ರಿಶೂರಿನ ಕೊಡಕರ ಪೊಲೀಸ್ ಠಾಣೆಯಲ್ಲಿ ಈ ದೂರನ್ನು ಸಲ್ಲಿಸಿದ್ದ.

ಶಮಜೀರ್ ಬಿಜೆಪಿ ಜೊತೆ ತನ್ನ ನಂಟನ್ನು ಉಲ್ಲೇಖಿಸಿಲ್ಲ ಮತ್ತು ಕಾರಿನಲ್ಲಿದ್ದ ಹಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿಯು ಹೇಳಿಕೊಂಡಿದೆ. ಅಂದ ಹಾಗೆ 25 ಲ.ರೂ. ವಿಧಾನಸಭಾ ಚುನಾವಣಾ ಅಭ್ಯರ್ಥಿ ಪ್ರಚಾರಕ್ಕಾಗಿ ಬಳಸಲು ಅನುಮತಿಯಿರುವ ಮೊತ್ತದ ವ್ಯಾಪ್ತಿಯೊಳಗೆ ಬರುತ್ತದೆ.

ಆದರೆ ಕಾರಿನಿಂದ 3.5 ಕೋ.ರೂ.ಗಳನ್ನು ದರೋಡೆ ಮಾಡಲಾಗಿತ್ತು ಎಂದು ದೃಢಪಡದ ವರದಿಗಳು ಆರೋಪಿಸಿವೆ. ಇದು ಬಿಜೆಪಿಯು ಎದುರಾಳಿ ಪಕ್ಷಗಳ ಶಾಸಕರಿಗೆ ಆಮಿಷವೊಡ್ಡಲು ಬಳಸಲು ಯೋಜಿಸಿದ್ದ ಅಕ್ರಮ ಹಣವಾಗಿತ್ತು ಎಂಬ ಆರೋಪಗಳಿಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿಸಲಾಗಿರುವ ಕ್ರಿಮಿನಲ್ ಹಿನ್ನೆಲೆಯ 19 ವ್ಯಕ್ತಿಗಳಿಂದ 90 ಲ.ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವಿಶೇಷ ತನಿಖಾ ತಂಡ (ಸಿಟ್)ದ ಹೇಳಿಕೆಯು ಈ ಊಹಾಪೋಹಕ್ಕೆ ಇಂಬು ನೀಡಿದೆ.

ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಎಂ.ಗಣೇಶ್, ರಾಜ್ಯ ಕಚೇರಿಯ ಕಾರ್ಯದರ್ಶಿ ಜಿ.ಗಿರೀಶ್, ತ್ರಿಶೂರು ಘಟಕದ ಕಾರ್ಯದರ್ಶಿ ಕೆ.ಆರ್.ಹರಿ, ಜಿಲ್ಲಾ ಖಜಾಂಚಿ ಸುಜಯ್ ಸಿನಾನ್, ಅಯ್ಯಂಥೋಳ ಪ್ರದೇಶ ಕಾರ್ಯದರ್ಶಿ ಕೆ.ಕಾಶಿನಾಥನ್, ತ್ರಿಶೂರು ಕಚೇರಿಯ ಕಾರ್ಯದರ್ಶಿ ಸತೀಶನ್ ಮತ್ತು ಅಳಪ್ಪುಳ ಖಜಾಂಚಿ ಕೆ.ಜಿ.ಕರ್ತ ಅವರನ್ನು ಸಿಟ್ ಪ್ರಶ್ನಿಸಿದೆ.

ದರೋಡೆಯ ಬಳಿಕ ತಾವು ಕರ್ತರನ್ನು ಸಂಪರ್ಕಿಸಿದ್ದೆವು ಎಂಬ ಬಂಧನದಲ್ಲಿರುವ ಕೆಲವರ ಹೇಳಿಕೆಗಳು ಮತ್ತು ಅವರ ದೂರವಾಣಿ ಕರೆಗಳ ದಾಖಲೆಗಳು ಇದಕ್ಕೆ ಪುಷ್ಟಿ ನೀಡಿರುವ ಹಿನ್ನೆಲೆಯಲ್ಲಿ ಕರ್ತರನ್ನು ಸಿಟ್ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದರೋಡೆಗೆ ಮುನ್ನ ರಾತ್ರಿಯನ್ನು ತಾವು ತ್ರಿಶೂರು ಬಿಜೆಪಿ ಕಚೇರಿಯು ಬುಕ್ ಮಾಡಿದ್ದ ಎರಡು ಹೋಟೆಲ್ ರೂಮ್ ಗಳಲ್ಲಿ ಕಳೆದಿದ್ದಾಗಿ ಕೆಲವು ಆರೋಪಿಗಳು ಒಪ್ಪಿಕೊಂಡಿದ್ದು,ಇದು ಒಳಗಿನವರ ಕೈವಾಡವನ್ನು ಸೂಚಿಸುತ್ತದೆ ಎಂದು ಅವು ಆರೋಪಿಸಿದವು.

ಪ್ರಕರಣವು ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯ ವ್ಯಾಪ್ತಿಯೊಳಗೆ ಬರುವುದರಿಂದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶ ನೀಡುವಂತೆ ಕೋರಿ ಲೋಕತಾಂತ್ರಿಕ ಜನತಾದಳದ ಯುವಘಟಕದ ರಾಷ್ಟ್ರೀಯ ಅಧ್ಯಕ್ಷ ಸಲೀಂ ಮಡವೂರು ಅವರು ಸೋಮವಾರ ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.
 
ತನ್ನ ಪಕ್ಷಕ್ಕೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ದರೋಡೆಯ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಘಟನೆಯು ಪಕ್ಷದ ಕಾರ್ಯಕರ್ತರಲ್ಲಿ ಪ್ರಶ್ನೆಗಳು ಮತ್ತು ಅತೃಪ್ತಿಯನ್ನು ಹುಟ್ಟಿಹಾಕಿರುವಂತಿದೆ ಮತ್ತು ಪಕ್ಷದಲ್ಲಿ ಒಳಜಗಳಕ್ಕೆ ಕಾರಣವಾಗಿದ್ದು, ರವಿವಾರ ತ್ರಿಶೂರಿನ ತ್ರಿಥಲ್ಲೂರ್ ಎಂಬಲ್ಲಿ ಬಿಜೆಪಿ ಕಾರ್ಯಕರ್ತ ಕಿರಣ ಎಂಬಾತನಿಗೆ ಎದುರಾಳಿ ಗುಂಪಿನ ಸದಸ್ಯನೋರ್ವ ಚೂರಿಯಿಂದ ಇರಿದಿದ್ದಾನೆ. ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.

140 ಸ್ಥಾನಗಳ ಪೈಕಿ ಕೇವಲ 35 ಸ್ಥಾನಗಳನ್ನು ಗೆದ್ದರೂ ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರಲಿದೆ ಎಂದು ಸುರೇಂದ್ರನ್ ಚುನಾವಣೆಗೆ ನೀಡಿದ್ದ ಹೇಳಿಕೆಯನ್ನು ಈಗ ಈ ಪ್ರಕರಣವು ಮುನ್ನೆಲೆಗೆ ತಂದಿದೆ.

ಕೃಪೆ: telegraphindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News