ಸಿಬಿಎಸ್ ಇ 12ನೇ ತರಗತಿಯ ಮಂಡಳಿ ಪರೀಕ್ಷೆ ರದ್ದು: ಪ್ರಧಾನಿ ನರೇಂದ್ರ ಮೋದಿ

Update: 2021-06-01 17:44 GMT

ಹೊಸದಿಲ್ಲಿ,ಜೂ.1: ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಈ ವರ್ಷದ ಸಿಬಿಎಸ್ಇ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲು ಕೇಂದ್ರ ಸರಕಾರವು ಮಂಗಳವಾರ ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಸಿಬಿಎಸ್ಇ ಕಾಲಬದ್ಧ ರೀತಿಯಲ್ಲಿ ‘ಸೂಕ್ತ ವಸ್ತುನಿಷ್ಠ ಮಾನದಂಡಗಳ ’ಆಧಾರದಲ್ಲಿ 12ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಸಿದ್ಧಪಡಿಸಲಿದೆ ಎಂದು ಅದು ತಿಳಿಸಿದೆ.

ಕಳೆದ ವರ್ಷದಂತೆ,ಕೆಲವು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲು ಇಚ್ಛಿಸಿದರೆ ಅದಕ್ಕೆ ಸಿಬಿಎಸ್ಇ ಅವಕಾಶವನ್ನು ಕಲ್ಪಿಸಲಿದೆ ಮತ್ತು ಪೂರಕ ವಾತಾವರಣವು ಸೃಷ್ಟಿಯಾದಾಗ ಪರೀಕ್ಷೆಗಳನ್ನು ನಡೆಸಲಾಗುವುದು.

ವಿದ್ಯಾರ್ಥಿಗಳ ಹಿತಾಸಕ್ತಿಯ ದೃಷ್ಟಿಯಲ್ಲಿ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಹೇಳಿದ ಮೋದಿ,ಕೋವಿಡ್-19 ಶೈಕ್ಷಣಿಕ ವರ್ಷವನ್ನು ವ್ಯತ್ಯಯಗೊಳಿಸಿದೆ ಮತ್ತು ಸಿಬಿಎಸ್ಇ ಪರೀಕ್ಷೆಗಳ ವಿಷಯವು ವಿದ್ಯಾರ್ಥಿಗಳು,ಪೋಷಕರು ಹಾಗೂ ಶಿಕ್ಷಕರಲ್ಲಿ ಆತಂಕವನ್ನು ಸೃಷ್ಟಿಸಿದೆ ಮತ್ತು ಇದಕ್ಕೆ ಅಂತ್ಯ ಹಾಡಬೇಕಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News