ಮಮತಾ ಪ್ರಧಾನಿ ಸಭೆಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದರು: ಪ.ಬಂಗಾಳ ರಾಜ್ಯಪಾಲರ ಹೇಳಿಕೆ

Update: 2021-06-01 14:51 GMT
photo : twitter.com/jdhankhar1

ಕೋಲ್ಕತಾ, ಜೂ.1: ಪಶ್ಚಿಮ ಬಂಗಾಳದಲ್ಲಿ ಯಾಸ್ ಚಂಡಮಾರುತದ ಹಾನಿಯನ್ನು ಪರಿಶೀಲಿಸಲು ಮೇ 28ರಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಪಾಲ ಜಗದೀಪ್ ಧನ್ಕರ್, ಸಾರ್ವಜನಿಕ ಸೇವೆಗಿಂತ ಅಹಂ ಮೇಲುಗೈ ಸಾಧಿಸಿತು ಎಂದು ಹೇಳಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. 

‘ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಕಲೈಕುಂದದಲ್ಲಿ ನಿಗದಿಯಾಗಿದ್ದ ಸಭೆಗೂ ಮುನ್ನ ತನಗೆ ಕರೆ ಮಾಡಿದ ಮುಖ್ಯಮಂತ್ರಿ, ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸಭೆಯಲ್ಲಿ ಉಪಸ್ಥಿತರಿದ್ದರೆ ತಾನು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು. ಸಾರ್ವಜನಿಕ ಸೇವೆಗಿಂತ ಅಹಂ ಹೆಚ್ಚಾಯಿತು’ ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ. 

ಪ್ರಧಾನಿ- ಮುಖ್ಯಮಂತ್ರಿ ಮಧ್ಯೆ ನಡೆಯುವ ಸಭೆಯಲ್ಲಿ ಬಿಜೆಪಿ ಶಾಸಕನಿಗೆ ಪಾಲ್ಗೊಳ್ಳುವ ಅಧಿಕಾರವಿಲ್ಲ ಎಂಬ ಕಾರಣದಿಂದ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋತಿದ್ದರು.

ರಾಜ್ಯಪಾಲರ ಹೇಳಿಕೆ ದುರದೃಷ್ಟಕರ. ಮುಖ್ಯಮಂತ್ರಿ 24 ಗಂಟೆಯೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಅವರ ಪ್ರತಿಯೊಂದು ನಡೆಯಲ್ಲೂ ರಾಜ್ಯದ ಒಳಿತಿನ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಟಿಎಂಸಿ ಪ್ರತಿಕ್ರಿಯಿಸಿದೆ. ಈ ರೀತಿಯ ಹೇಳಿಕೆ ನೀಡಲು ರಾಜ್ಯಪಾಲರಿಗೆ ಅಧಿಕಾರವಿಲ್ಲ. ದಿನದ 24 ಗಂಟೆಯೂ ಜನರಿಗಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿಗೆ ಏನು ಮಾಡಬೇಕೆಂದು ಗೊತ್ತಿದೆ ಎಂದು ಟಿಎಂಸಿ ಸಂಸದ ಸೌಗತಾ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News