ಆದಿತ್ಯನಾಥ್‌ ನಾಯಕತ್ವ ಬದಲಾವಣೆಯನ್ನು ಅಲ್ಲಗಳೆದ ಬಿಜೆಪಿ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್

Update: 2021-06-02 10:27 GMT

ಹೊಸದಿಲ್ಲಿ: ಆದಿತ್ಯನಾಥ್ ರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನದಿಂದ  ಕೆಳಗಿಳಿಸಲಾಗುವುದೆಂಬ ಊಹಾಪೋಹಗಳಿಗೆ ಬಿಜೆಪಿ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ತೆರೆ ಎಳೆದಿದ್ದಾರೆ. ಅಂತಹ ಸಾಧ್ಯತೆಯನ್ನು ಅಲ್ಲಗಳೆದಿರುವ ಅವರು ಉತ್ತರ ಪ್ರದೇಶ ಸರಕಾರ ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿಗೆ ಸರಿಸಾಟಿಯಿಲ್ಲ ಎಂದು ಹೇಳಿದ್ದಾರೆ.

ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಲಕ್ನೋದಲ್ಲಿ ಪರಿಶೀಲನಾ ಸಭೆಗಳಲ್ಲಿ ಭಾಗವಹಿಸಲು ರಾಜ್ಯಕ್ಕೆ ಮೂರು ದಿನಗಳ ಭೇಟಿಯಲ್ಲಿದ್ದಾರೆ. ಆದಿತ್ಯನಾಥ್ 2017ರಲ್ಲಿ ರಾಜ್ಯದ ಸಿಎಂ ಆದ ನಂತರ ಇಂತಹ ಸಭೆಯಲ್ಲಿ ಇದೇ ಮೊದಲ ಬಾರಿಗೆ ಹಿರಿಯ ಬಿಜೆಪಿ ನಾಯಕರು ಭಾಗವಹಿಸುತ್ತಿದ್ದಾರೆ.

ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಹಾಗೂ ಇತ್ತೀಚಿಗಿನ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಯ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲದೇ ಇರುವ ಹಿನ್ನೆಲೆಯಲ್ಲಿ ಸಭೆಗಳು ನಡೆಯುತ್ತಿವೆ.

ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿಗೆ  ಆದಿತ್ಯನಾಥ್ ಸರಕಾರ ಈಗಾಗಲೇ ಬಹಳಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಗಂಗಾ ನದಿಯಲ್ಲಿ ತೇಲಿ ಬಂದ ಕೋವಿಡ್ ಸೋಂಕಿತರ ಮೃತದೇಹಗಳ ವಿಚಾರವಂತೂ ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಚರ್ಚೆಗೀಡಾಗಿತ್ತು. ಹಲವಾರು ಬಿಜೆಪಿ ಸಚಿವರು ಹಾಗೂ ಶಾಸಕರು ಕೂಡ ತಮ್ಮದೇ ಸರಕಾರದ ವಿರುದ್ಧ ಅಸಮಾಧಾನದ ಮಾತುಗಳನ್ನೂ ಆಡಿದ್ದರು.

ಆದರೆ ರಾಜ್ಯದ ಬಿಜೆಪಿ ಸರಕಾರ ಕೋವಿಡ್ 2ನೇ ಅಲೆಯಲ್ಲಿ ಪರಿಣಾಮಕಾರಿಯಾಗಿ ನಿಭಾಯಿಸಿದೆ ಎಂದು ಬಿ ಎಲ್ ಸಂತೋಷ್ ಹೇಳಿದ್ದಾರೆ. "ಕೇವಲ ಐದು ವಾರಗಳಲ್ಲಿ ದೈನಂದಿನ ಪ್ರಕರಣಗಳು ಶೇ93ರಷ್ಟು ಕಡಿಮೆಯಾಗಿದೆ ಎಂದು ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿ ಸಂತೋಷ್ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ರಾಧಾ ಮೋಹನ್ ಸಿಂಗ್ ಪ್ರತಿಕ್ರಿಯಿಸಿ  ಆದಿತ್ಯನಾಥ್ ಮತ್ತವರ ಇಬ್ಬರು ಉಪಮುಖ್ಯಮಂತ್ರಿಗಳ ಸ್ಥಾನಗಳಿಗೆ ಬೇರೆಯವರನ್ನು ನೇಮಕಗೊಳಿಸಲಾಗುವುದೆಂಬ ಸುದ್ದಿಗಳು ಕಾಲ್ಪನಿಕ ಎಂದರು. ಸಭೆಯಲ್ಲಿ ನಾವು ಕೈಗೊಂಡ ಸೇವೆಯನ್ನು ಪರಿಶೀಲಿಸಲಾಯಿತು. ಸಂಭಾವ್ಯ ಮೂರನೇ ಅಲೆ ಹೇಗೆ ಎದುರಿಸಬೇಕೆಂಬ ಚರ್ಚೆಗಳೂ ನಡೆದವು. ಮೇಲಾಗಿ ಇತರ ರಾಜ್ಯಗಳಿಗೆ ಹೋಲಿಸಿದಾಗ ಆದಿತ್ಯನಾಥ್ ಅವರು ಕೋವಿಡ್ ಸಾಂಕ್ರಾಮಿಕವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News