×
Ad

ಪ್ರಧಾನಿ ಮೋದಿಯನ್ನು ಪ್ರಶಂಸಿಸಿದ್ದ ಜಸ್ಟಿಸ್ ಅರುಣ್ ಮಿಶ್ರಾ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ ಆಯ್ಕೆ

Update: 2021-06-02 17:38 IST

ಹೊಸದಿಲ್ಲಿ: ಕಳೆದ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಬಾಯ್ತುಂಬಾ ಹೊಗಳಿ ವಿವಾದಕ್ಕಿಡಾಗಿದ್ದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನಿವೃತ್ತರಾಗಿದ್ದ ಜಸ್ಟಿಸ್ ಮಿಶ್ರಾ ತಾವು ನ್ಯಾಯಾಧೀಶ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿಯೇ ನಡೆದಿದ್ದ ಅಂತರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಪ್ರಧಾನಿ ಮೋದಿಯನ್ನು "ಅಂತರಾಷ್ಟ್ರೀಯ ಖ್ಯಾತಿವೆತ್ತ ಪಡೆದ ದಾರ್ಶನಿಕ" ಹಾಗೂ "ಜಾಗತಿಕವಾಗಿ ಯೋಚಿಸಿ ಸ್ಥಳೀಯವಾಗಿ ಕಾರ್ಯಾಚರಿಸುವ ಬಹುಮುಖ ಪ್ರತಿಭೆ" ಎಂದು ಬಣ್ಣಿಸಿದ್ದರು.

ಇದೀಗ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರನ್ನಾಗಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದ್ದು ಇದೊಂದು ರಾಜಕೀಯ ಪ್ರೇರಿತ ಕ್ರಮವೆಂದೇ ವಿಪಕ್ಷ ನಾಯಕರು ಬಣ್ಣಿಸುತ್ತಿದ್ದಾರೆ.

ಆಯೋಗದ ಈ ಹಿಂದಿನ ಅಧ್ಯಕ್ಷರಾಗಿದ್ದ ಮಾಜಿ ಸಿಜೆಐ ಎಚ್ ಎಲ್ ದತ್ತು ಡಿಸೆಂಬರ್ 2020ರಲ್ಲಿ ನಿವೃತ್ತರಾದ ನಂತರ ಈ ಹುದ್ದೆಯನ್ನು ತುಂಬಲಾಗಿರಲಿಲ್ಲ.

ಜಸ್ಟಿಸ್ ಮಿಶ್ರಾ ಅವರ ನೇಮಕ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ನಾಯಕಿ ಮಹುಆ ಮೊಯಿತ್ರ, "ಎಲ್ಲಾ ಒಳ್ಳೆಯ ಫಲ ಕಾಯುವವರಿಗೆ ಬರುತ್ತದೆ, ಪ್ರಮುಖವಾಗಿ ಕರ್ತವ್ಯದಲ್ಲಿದ್ದ ಸಂದರ್ಭ ಪ್ರಧಾನಿಯನ್ನು ʼಅಂತರಾಷ್ಟ್ರೀಯ ಖ್ಯಾತಿವೆತ್ತ ದಾರ್ಶನಿಕ ಹಾಗೂ ಜಾಗತಿಕವಾಗಿ ಯೋಚಿಸಿ ಸ್ಥಳೀಯವಾಗಿ ಕಾರ್ಯಾಚರಿಸುವವರು' ಎಂದು  ಹೇಳಿದವರಿಗೆ" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಮಿಶ್ರಾ ಆವರ ನೇಮಕಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯೋಗದ ಅಧ್ಯಕ್ಷರ ಆಯ್ಕೆ ಸಮಿತಿಯ ಸದಸ್ಯರಲ್ಲಿ ಖರ್ಗೆ ಕೂಡ ಒಬ್ಬರಾಗಿದ್ದರು.

"ಆಯೋಗಕ್ಕೆ ಪರಿಶಿಷ್ಟ ಜಾತಿ, ವರ್ಗಗಳು ಹಾಗೂ ಅಲ್ಪಸಂಖ್ಯಾತರ ಕನಿಷ್ಠ ಒಬ್ಬ ಸದಸ್ಯನನ್ನಾದರೂ ನೇಮಕ ಮಾಡಬೇಕು ಎಂದು  ಆಗ್ರಹಿಸಿದ್ದೆ, ಆದರೆ ನನ್ನ ಪ್ರಸ್ತಾವನೆಗಳನ್ನು ಸಮಿತಿ ಒಪ್ಪದೇ ಇರುವುದರಿಂದ ಅಧ್ಯಕ್ಷರು ಹಾಗೂ ಸದಸ್ಯರುಗಳ ನೇಮಕ ಕುರಿತ ಸಮಿತಿಯ ಶಿಫಾರಸುಗಳಿಗೆ ನನ್ನ ಸಹಮತವಿಲ್ಲ, ಹೊಸ ನೇಮಕಾತಿಗಳು ಪಕ್ಷಪಾತಿಯಾಗಿವೆ" ಎಂದು ಅವರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News