ಹಿರಿಯ ಪತ್ರಕರ್ತ ವಿನೋದ್ ದುವಾ ವಿರುದ್ಧದ ದೇಶದ್ರೋಹ ಪ್ರಕರಣ ರದ್ದುಪಡಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು ರದ್ದುಪಡಿಸಿದೆ ಹಾಗೂ 1962 ರ ಆದೇಶವು ಪ್ರತಿಯೊಬ್ಬ ಪತ್ರಕರ್ತನನ್ನು ಇಂತಹ ಆರೋಪಗಳಿಂದ ರಕ್ಷಿಸಿದೆ ಎಂದು ಹೇಳಿದೆ.
ಬಿಜೆಪಿ ಮುಖಂಡನ ದೂರಿನ ಆಧಾರದ ಮೇಲೆ ವಿನೋದ್ ದುವಾ ಅವರ ವಿರುದ್ಧ ಕಳೆದ ವರ್ಷ ನಡೆದ ದಿಲ್ಲಿ ಗಲಭೆ ಕುರಿತು ಹಿಮಾಚಲ ಪ್ರದೇಶದಲ್ಲಿ ದೇಶದ್ರೋಹದ ಆರೋಪ ಹೊರಿಸಲಾಗಿತ್ತು. ನಕಲಿ ಸುದ್ದಿಗಳನ್ನು ಹರಡುವುದು, ಸಾರ್ವಜನಿಕ ಕಿರಿಕಿರಿಗೆ ಕಾರಣವಾಗುವುದು, ಮಾನಹಾನಿಕರ ವಿಷಯಗಳನ್ನು ಮುದ್ರಿಸುವುದು ಹಾಗೂ ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದಲ್ಲಿ ಪತ್ರಕರ್ತನ ಮೇಲೆ ಆರೋಪ ಹೊರಿಸಲಾಯಿತು.
ಹಿರಿಯ ಪತ್ರಕರ್ತ ವಿನೋದ್ ದುವಾ ಎಫ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯು ಅನುಮತಿ ನೀಡದ ಹೊರತು 10 ವರ್ಷಗಳ ಅನುಭವ ಹೊಂದಿರುವ ಯಾವುದೇ ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಬಾರದು ಎಂಬ ದುವಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಇದು ಶಾಸಕಾಂಗದ ಅಧಿಕಾರವನ್ನು ಅತಿಕ್ರಮಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
"ದೇಶದ್ರೋಹದ ಕುರಿತಾದ ಕೇದಾರ ನಾಥ್ ಸಿಂಗ್ ತೀರ್ಪಿನಡಿಯಲ್ಲಿ ಪ್ರತಿಯೊಬ್ಬ ಪತ್ರಕರ್ತನೂ ರಕ್ಷಣೆಗೆ ಅರ್ಹನಾಗಿರುತ್ತಾನೆ" ಎಂದು ನ್ಯಾಯಾಧೀಶರು ಹೇಳಿದರು.