×
Ad

ಖಾಸಗಿ ವಲಯಕ್ಕೆ ಮೀಸಲಾಗಿದ್ದ ಕೋಟಾದ ಲಸಿಕೆ ಆಗಿದ್ದೇನು?

Update: 2021-06-04 10:00 IST

ಹೊಸದಿಲ್ಲಿ, ಜೂ.4: ಕೇಂದ್ರ ಸರ್ಕಾರದ ಲಸಿಕೆ ನೀತಿ ಅನ್ವಯ ಶೇ.25ರಷ್ಟು ಕೋಟಾವನ್ನು ಖಾಸಗಿ ವಲಯಕ್ಕೆ ನಿಗದಿಪಡಿಸಲಾಗಿದೆ. ಆದರೆ ಮೇ 30ರವರೆಗಿನ ಲಸಿಕೆ ಅಂಕಿಅಂಶಗಳನ್ನು ವಿಶ್ಲೇಷಿಸಿದರೆ, ಖಾಸಗಿ ಲಸಿಕಾ ಕೇಂದ್ರಗಳು ನೀಡಿರುವ ಒಟ್ಟು ಲಸಿಕೆ ಪ್ರಮಾಣ ಇದುವರೆಗೆ ನೀಡಲಾದ ಒಟ್ಟು ಲಸಿಕೆಯ ಶೇಕಡ 7.5ರಷ್ಟು ಮಾತ್ರ ಎನ್ನುವುದು ತಿಳಿದು ಬರುತ್ತದೆ. ಒಟ್ಟು ಏಳು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಈ ಪ್ರಮಾಣ ಶೇಕಡ 10ನ್ನು ದಾಟಿದೆ. ಕೋವಿನ್ ಡ್ಯಾಶ್‌ಬೋರ್ಡ್‌ನಲ್ಲಿ ಪಟ್ಟಿ ಮಾಡಲಾದ 750 ಜಿಲ್ಲೆಗಳ ಪೈಕಿ 80 ಜಿಲ್ಲೆಗಳಲ್ಲಿ ಖಾಸಗಿ ವಲಯ ನೀಡಿದ ಲಸಿಕೆ ಪ್ರಮಾಣ ಶೇಕಡ 10ಕ್ಕಿಂತ ಅಧಿಕವಿದೆ.

ಖಾಸಗಿ ವಲಯ ನಗರದ ಆಯ್ದ ಪ್ರದೇಶಗಳಲ್ಲೇ ಹೆಚ್ಚಿನ ಲಸಿಕೆ ನೀಡಿವೆ. ದೇಶದ ದೊಡ್ಡ ಮೆಟ್ರೋಪಾಲಿಟನ್ ನಗರಗಳ 25 ಜಿಲ್ಲೆಗಳಲ್ಲಿ ಖಾಸಗಿ ವಲಯ ನೀಡಿದ ಲಸಿಕೆ ಪ್ರಮಾಣ ಶೇಕಡ 54ರಷ್ಟಿದೆ.

ದೇಶದ ಸುಮಾರು 80 ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಶೇಕಡ 95ರಷ್ಟು ಲಸಿಕೆ ನೀಡಿವೆ. ಅರ್ಧದಷ್ಟು ಜಿಲ್ಲೆಗಳಲ್ಲಿ ಖಾಸಗಿ ವಲಯದ ಪಾಲು ಶೇಕಡ ಒಂದಕ್ಕಿಂತಲೂ ಕಡಿಮೆ. ಅದರಲ್ಲೂ ಗ್ರಾಮೀಣ ಹಾಗೂ ಈಶಾನ್ಯ ರಾಜ್ಯಗಳ ಜಿಲ್ಲೆಗಳಲ್ಲಿ ಈ ಪ್ರಮಾಣ ಅತ್ಯಲ್ಪ. ಬೆಂಗಳೂರು, ದಿಲ್ಲಿ, ಹೈದರಾಬಾದ್, ಮುಂಬೈ, ಕೊಲ್ಕತ್ತಾ ಹಾಗೂ ಚೆನ್ನೈ ನಗರಗಳಲ್ಲಿ ಮಾತ್ರ ಖಾಸಗಿ ವಲಯದವರು ಹೆಚ್ಚು ಲಸಿಕೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳು ಗರಿಷ್ಠ ಲಸಿಕೆ ನೀಡಿರುವುದು ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಒಟ್ಟು ನೀಡಿದ ಲಸಿಕೆ ಪೈಕಿ ಖಾಸಗಿಯವರ ಪಾಲು ಶೇಕಡ 44ರಷ್ಟಿದೆ.

ಜನವರಿ 16ರಿಂದೀಚೆಗೆ ಒಟ್ಟು 20.8 ಕೋಟಿ ಡೋಸ್‌ಗಳನ್ನು ನೀಡಲಾಗಿದ್ದು, ಈ ಪೈಕಿ ಖಾಸಗಿ ವಲಯದವರು ನೀಡಿದ ಲಸಿಕೆ ಪ್ರಮಾಣ ಕೇವಲ 1.6 ಕೋಟಿ. ಖಾಸಗಿ ವಲಯದ ವಾಸ್ತವ ಸಾಧನೆಯನ್ನೂ ಹಂಚಿಕೆಯಾಗಿರುವ ಶೇಕಡ 25ರಷ್ಟು ಲಸಿಕೆಯನ್ನೂ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಅದರಲ್ಲೂ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಖಾಸಗಿ ವಲಯದಿಂದ ತಾರತಮ್ಯ ಆಗಿರುವುದು ಸ್ಪಷ್ಟವಾಗಿದ್ದು, ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಆತಂಕವನ್ನು ಇದು ದೃಢಪಡಿಸಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News