ಶಾಸಕಾಂಗ ಪಕ್ಷದ ನಾಯಕ ಸೇರಿದಂತೆ ಇಬ್ಬರು ಶಾಸಕರನ್ನು ವಜಾಗೊಳಿಸಿದ ಬಿಎಸ್ಪಿ
ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ತನ್ನ ಶಾಸಕಾಂಗ ಪಕ್ಷದ ಮುಖಂಡ ಲಾಲ್ಜಿ ವರ್ಮಾ ಹಾಗೂ ಮತ್ತೊಬ್ಬ ಶಾಸಕನನ್ನು ಗುರುವಾರ ವಜಾ ಮಾಡಿದೆ.
ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಲಾಲ್ಜಿ ವರ್ಮಾ ಹಾಗೂ ರಾಮ್ ಅಚಲ್ ರಾಜ್ ಭರ್ ಎಂಬ ಇಬ್ಬರು ಶಾಸಕರನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ಪಕ್ಷವು ಹೇಳಿಕೆಯೊಂದರಲ್ಲಿ ತಿಳಿಸಿದೆ.
"ವರ್ಮಾ ಅವರನ್ನು ಶಾಸಕಾಂಗ ಪಕ್ಷದ ಮುಖಂಡ ಸ್ಥಾನದಿಂದ ತೆಗೆದುಹಾಕಲಾಗಿದೆ. ಶಾ ಆಲಂ ಅಲಿಯಾಸ್ ಗುಡ್ಡು ಜಮಾಲಿ ಅವರನ್ನು ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ನಾಯಕರಾಗಿ ನೇಮಕ ಮಾಡಲಾಗುವುದು" ಎಂದು ಪಕ್ಷ ತಿಳಿಸಿದೆ.
ಲಾಲ್ಜಿ ವರ್ಮಾ ಅವರು ಕತೇರಿ ಸ್ಥಾನದಿಂದ ಬಿಎಸ್ಪಿ ಶಾಸಕರಾಗಿದ್ದರೆ, ರಾಜ್ ಭರ್ ಅವರು ಅಕ್ಬರ್ಪುರ ಕ್ಷೇತ್ರದ ಶಾಸಕರಾಗಿದ್ದಾರೆ.
ಈ ಇಬ್ಬರು ವಜಾ ಮಾಡಿದ ನಾಯಕರನ್ನು ಭವಿಷ್ಯದಲ್ಲಿ ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುವುದಿಲ್ಲ ಹಾಗೂ ಅವರಿಗೆ ಪಕ್ಷದ ಟಿಕೆಟ್ ಸಹ ನೀಡಲಾಗುವುದಿಲ್ಲ ಎಂದು ಪಕ್ಷ ಹೇಳಿದೆ.