×
Ad

ಮಧ್ಯಪ್ರದೇಶ: ಮುಷ್ಕರ ‘ಕಾನೂನುಬಾಹಿರ’ ಎಂಬ ಹೈಕೋರ್ಟ್ ತೀರ್ಪಿನ ಬಳಿಕ 3,000 ವೈದ್ಯರು ರಾಜೀನಾಮೆ

Update: 2021-06-04 11:31 IST
ಸಾಂದರ್ಭಿಕ ಚಿತ್ರ

ಭೋಪಾಲ್: ರಾಜ್ಯದಲ್ಲಿ ಮುಷ್ಕರ ನಿರತ ಕಿರಿಯ ವೈದ್ಯರಿಗೆ 24 ಗಂಟೆಗಳ ಒಳಗೆ ತಮ್ಮ ಕರ್ತವ್ಯಕ್ಕೆ  ಹಾಜರಾಗುವಂತೆ ಮಧ್ಯಪ್ರದೇಶ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.  ಆದರೆ ಸುಮಾರು 3,000 ವೈದ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.  ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಘೋಷಿಸಿದ್ದಾರೆ.

ವೈದ್ಯರ ನಾಲ್ಕು ದಿನಗಳ ಮುಷ್ಕರವನ್ನು 'ಕಾನೂನುಬಾಹಿರ' ಎಂದು ನ್ಯಾಯಾಲಯವು ತೀರ್ಪು ನೀಡಿತ್ತು.

ರಾಜ್ಯದ ಆರು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 3 ಸಾವಿರ ಕಿರಿಯ ವೈದ್ಯರು ಗುರುವಾರ ತಮ್ಮ ಹುದ್ದೆಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ತಮ್ಮ ರಾಜೀನಾಮೆಗಳನ್ನು ಆಯಾ ಕಾಲೇಜುಗಳ ಡೀನ್‌ಗೆ ಸಲ್ಲಿಸಿದ್ದಾರೆ ಎಂದು ಮಧ್ಯಪ್ರದೇಶ ಕಿರಿಯ ವೈದ್ಯರ ಸಂಘದ (ಎಂಪಿಜೆಡಿಎ) ಅಧ್ಯಕ್ಷ ಡಾ.ಅರವಿಂದ ಮೀನಾ ತಿಳಿಸಿದ್ದಾರೆ.

ಸೋಮವಾರ ಪ್ರಾರಂಭವಾದ ಮುಷ್ಕರ ಅವರ ಬೇಡಿಕೆಗಳು ಈಡೇರುವವರೆಗೂ ಮುಂದುವರಿಯಲಿದೆ ಎಂದರು.

ಕಿರಿಯ ವೈದ್ಯರು ರಾಜ್ಯ ಸರಕಾರದ ಮುಂದೆ ಅನೇಕ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ, ಸ್ಟೈಫಂಡ್ ಹೆಚ್ಚಳ ಹಾಗೂ  ಅವರಿಗೆ ಹಾಗೂ  ಅವರ ಕುಟುಂಬಗಳಿಗೆ ಮಾರಣಾಂತಿಕ ಕೊರೋನವೈರಸ್ ಸೋಂಕು ತಗುಲಿದರೆ ಅವರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.

ಮಧ್ಯಪ್ರದೇಶ ಕಿರಿಯ ವೈದ್ಯರ ಸಂಘವು   ರಾಜ್ಯವ್ಯಾಪಿ ಕರೆ ನೀಡಿರುವ ಮುಷ್ಕರವು ಕಾನೂನು ಬಾಹಿರ. ಪ್ರತಿಭಟನಾ ನಿರತ ಕಿರಿಯ ವೈದ್ಯರು  ಶುಕ್ರವಾರ ಮಧ್ಯಾಹ್ನ 2: 30 ರ ವೇಳೆಗೆ ಕೆಲಸಕ್ಕೆ ಮರಳುವಂತೆ ಜಬಲ್ಪುರದ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿತು.

ಮುಷ್ಕರ ನಡೆಸಿದ ವೈದ್ಯರು ನಿಗದಿತ ಕಾಲಾವಧಿಯಲ್ಲಿ ಕರ್ತವ್ಯ ಪುನರಾರಂಭಿಸದಿದ್ದಲ್ಲಿ, ರಾಜ್ಯ ಸರಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಮುಹಮ್ಮದ್ ರಫೀಕ್ ಅಹ್ಮದ್ ಹಾಗೂ  ನ್ಯಾಯಮೂರ್ತಿ ಸುಜೋಯ್ ಪಾಲ್ ಅವರ ವಿಭಾಗೀಯ ಪೀಠ ಹೇಳಿತು.

ಜಬಲ್ಪುರ ಮೂಲದ ವಕೀಲ ಶೈಲೇಂದ್ರ ಸಿಂಗ್ ಸಲ್ಲಿಸಿದ್ದ ವೈದ್ಯರ  ಮುಷ್ಕರ ವಿರುದ್ಧದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News