×
Ad

ಜುಲೈ ತನಕ ಮೆಹುಲ್ ಚೋಕ್ಸಿ ಜೈಲು ವಾಸ: ಡೊಮಿನಿಕಾಕ್ಕೆ ತೆರಳಿದ್ದ ಭಾರತದ ತನಿಖಾ ತಂಡ ಬರಿಗೈಯಲ್ಲಿ ವಾಪಸ್

Update: 2021-06-04 13:59 IST

ಹೊಸದಿಲ್ಲಿ ಭಾರತದಿಂದ ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಸಲ್ಲಿಸಿದ್ದ  ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು  ಕೆರಿಬಿಯನ್ ರಾಷ್ಟ್ರದ ಹೈಕೋರ್ಟ್ ಜುಲೈಗೆ ಮುಂದೂಡಿದೆ. ಹೀಗಾಗಿ ಚೋಕ್ಸಿ ಜುಲೈ ತನಕವೂ ಜೈಲಿನಲ್ಲಿರಬೇಕಾಗುತ್ತದೆ. ಡೊಮಿನಿಕಾದಿಂದ ಮೆಹುಲ್ ಚೋಕ್ಸಿಯನ್ನು ಮರಳಿ ಕರೆತರಲು ತೆರಳಿದ್ದ ಭಾರತದ ತನಿಖಾ ತಂಡದ ಸದಸ್ಯರು ಬರಿಗೈಯಲ್ಲಿ ದೇಶಕ್ಕೆ ವಾಪಸಾಗಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಾಗೂ  ಸಿಬಿಐನ ಬ್ಯಾಂಕ್ ಸೆಕ್ಯುರಿಟೀಸ್ ಆ್ಯಂಡ್ ಫ್ರಾಡ್ಸ್ (ಮುಂಬೈ) ವಿಭಾಗದ ಮುಖ್ಯಸ್ಥರನ್ನು ಒಳಗೊಂಡಿದ್ದ 8 ಸದಸ್ಯರು ತಂಡವು  ಕತರ್ ಏರ್ ವೇಸ್ ಖಾಸಗಿ ಜೆಟ್‌ನಲ್ಲಿ ಗುರುವಾರ ರಾತ್ರಿ ಡೊಮಿನಿಕಾದ ಮೆಲ್ವಿಲ್ಲೆ ಹಾಲ್ ವಿಮಾನ ನಿಲ್ದಾಣದಿಂದ ಹೊರಟಿತು ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

8 ಸದಸ್ಯರ ತಂಡವು ಗಡಿಪಾರು ಮಾಡಲು ಡೊಮಿನಿಕನ್ ನ್ಯಾಯಾಲಯ ಅನುಮತಿಸಿದರೆ ಚೋಕ್ಸಿಯನ್ನು ಮತ್ತೆ ಭಾರತಕ್ಕೆ ಕರೆತರುವ ಭರವಸೆಯಲ್ಲಿತ್ತು.

ಡೊಮಿನಿಕಾದಿಂದ ಹೊರಟಿರುವ ವಿಮಾನವು ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ರಾತ್ರಿ 11 ಗಂಟೆಗೆ ಇಳಿಯಲಿದೆ.

ಚೋಕ್ಸಿ ಅರ್ಜಿಯ ವಿಚಾರಣೆಯನ್ನು ಡೊಮಿನಿಕನ್ ಹೈಕೋರ್ಟ್ ಗುರುವಾರ ಮುಂದೂಡಿತ್ತು. ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ನ್ಯಾಯಾಲಯವು ಚೋಕ್ಸಿಗೆ ಜಾಮೀನು ನಿರಾಕರಿಸಿತು.

62 ವರ್ಷದ ಮೆಹುಲ್ ಚೋಕ್ಸಿ ಆ್ಯಂಟಿಗುವಾದಿಂದ ಡೊಮಿನಿಕಾ ಮೂಲಕ ಕ್ಯೂಬಾಗೆ ಪರಾರಿಯಾಗಲು ಯತ್ನಿಸಿದ್ದನೆಂದು ಆರೋಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News