ಫೈಝರ್ ಲಸಿಕೆಯಿಂದ ಲಸಿಕೀಕರಣ ಅಭಿಯಾನಕ್ಕೆ ಉತ್ತೇಜನ: ಡಾ. ಗುಲೇರಿಯಾ
Update: 2021-06-04 22:49 IST
ಹೊಸದಿಲ್ಲಿ, ಜೂ.4: ದೇಶದಲ್ಲಿ ಕೊರೋನ ಸೋಂಕಿನ ವಿರುದ್ಧದ ಲಸಿಕೆ ಉತ್ಪಾದಿಸಲು ವಿದೇಶಿ ಸಂಸ್ಥೆಗಳಾದ ಪೈಝರ್ ಹಾಗೂ ಮೊಡೆರ್ನಾಗಳಿಗೆ ಕೆಲವೊಂದು ವಿನಾಯಿತಿ ನೀಡಲಾಗಿದೆ. ಈ ಎರಡೂ ಸಂಸ್ಥೆಗಳೂ ಮಕ್ಕಳಿಗೂ ಲಸಿಕೆ ಉತ್ಪಾದಿಸುವ ಜೊತೆಗೆ, ವಯಸ್ಕರ ಲಸಿಕೀಕರಣ ಅಭಿಯಾನಕ್ಕೆ ಉತ್ತೇಜನ ನೀಡಲಿವೆ ಎಂದು ಎಐಐಎಂಎಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ. ಪೈಝರ್‌ಗೆ ಕೆಲವು ವಿನಾಯಿತಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಗುಲೇರಿಯಾ, ಪೈಝರ್ ಉತ್ಪಾದಿಸುವ ಲಸಿಕೆ ಮಕ್ಕಳಿಗೆ ಮಾತ್ರವಲ್ಲ, ವಯಸ್ಕರ ಲಸಿಕೀಕರಣ ಅಭಿಯಾನವನ್ನು ಪ್ರೋತ್ಸಾಹಿಸಲಿದೆ ಎಂದರು. ಸಿಎನ್‌ಎನ್ -ನ್ಯೂಸ್ 18ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಪೈಝರ್ ಮತ್ತು ಮೊಡೆರ್ನಾ ಸಂಸ್ಥೆಗಳಿಗೆ ವಿನಾಯಿತಿ ನೀಡಿರುವ ಬಗ್ಗೆ ಯಾವುದೇ ವಿವಾದಕ್ಕೆ ಕಾರಣವಿಲ್ಲ. ಅಮೆರಿಕ ಹಾಗೂ ಇತರ ರಾಷ್ಟ್ರಗಳೂ ಕೆಲವು ವಿನಾಯಿತಿ ನೀಡಿವೆ ಎಂದು ಕೇಂದ್ರ ಸರಕಾರದ ಉನ್ನತ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.