ಓಬಿರಾಯನ ಕಾಲದ ಅಧಿಕಾರಶಾಹಿ

Update: 2021-06-04 19:30 GMT

ಕೋವಿಡ್-19 ಎಲ್ಲಾ ಸಾರ್ವಜನಿಕ ಸಂಸ್ಥೆಗಳ ಹಣೆಬರಹಗಳನ್ನು ಬಯಲುಮಾಡಿದೆ. ಅಧಿಕಾರಶಾಹಿ ಅಂದರೆ ಬ್ಯೂರಾಕ್ರಸಿ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿಯೂ ಕೊರೋನ ಬಿಕ್ಕಟ್ಟಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವಲ್ಲಿ ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ. ಇದು ಸಾರ್ವಜನಿಕ ಬ್ಯೂರಾಕ್ರಸಿಯ ಸ್ಥಿತಿಸ್ಥಾಪಕತ್ವವನ್ನು, ಅದು ಎಷ್ಟೊಂದು ಹಳತಾಗಿ ಬದಲಾವಣೆಗೆ ಶೀಘ್ರವಾಗಿ ಸ್ಪಂದಿಸದಂತಾಗಿದೆ ಎಂಬುದನ್ನು ತೋರಿಸುತ್ತದೆ. ಇಪ್ಪತ್ತೊಂದನೇ ಶತಮಾನದಲ್ಲಿ ಸಾರ್ವಜನಿಕ ನೀತಿ ನಿರೂಪಿಸುವಿಕೆಗೆ ಹಾಗೂ ರೂಪಿಸಿದ ನೀತಿ ನಿಯಮಗಳ ಅನುಷ್ಠಾನಕ್ಕೆ ಪ್ರಜಾಸತ್ತಾತ್ಮಕ ದೇಶಗಳು ಇನ್ನೂ ಕೂಡ ಸಾಂಪ್ರದಾಯಿಕ, ಪಾರಂಪರಿಕ ಬ್ಯೂರಾಕ್ರಸಿಯನ್ನೇ ಅವಲಂಬಿಸುತ್ತಿವೆ. ಹೀಗಾಗಿ ಓರ್ವ ತಜ್ಞನಿಗಿಂತ (ಸ್ಪೆಷಲಿಸ್ಟ್) ಓರ್ವ ಸಾಮಾನ್ಯ ಅಧಿಕಾರಿಯನ್ನೇ (ಜನರಲಿಸ್ಟ್) ಹೆಚ್ಚು ಮುಖ್ಯನೆಂದು ತಿಳಿಯಲಾಗುತ್ತದೆ. ಉದಾಹರಣೆಗೆ, ಓರ್ವ ಜನರಲಿಸ್ಟ್ ಅಧಿಕಾರಿಯನ್ನು (ಐಎಎಸ್ ಹಾಗೂ ರಾಜ್ಯಗಳ ನಾಗರಿಕ ಸೇವಾ ಅಧಿಕಾರಿಗಳು) ಓರ್ವ ತಜ್ಞ/ತಜ್ಞರು ಎಂದು ಪರಿಗಣಿಸಲಾಗುತ್ತದೆ. ಪರಿಣಾಮವಾಗಿ ಆ ಅಧಿಕಾರಿ ಇಂದು ಒಂದು ಇಲಾಖೆ ಅಥವಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದು, ನಾಳೆ ಇನ್ನೊಂದರಲ್ಲಿ ಕೆಲಸ ಮಾಡುತ್ತಾನಾದರೂ ಆತನನ್ನು ಮೇಲಧಿಕಾರಿ ಅಥವಾ ತಜ್ಞನಾಗಿರುವ ತನ್ನ ಕೆಳಗಿನವರಿಗಿಂತ ಸುಪೀರಿಯರ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸರಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ ಸ್ಪೆಷಲಿಸ್ಟ್‌ರು ಜನರಲಿಸ್ಟ್‌ಗಳಿಗೆ ವಿಧೇಯರಾಗಿ, ಅವರ ತಾಳಕ್ಕೆ ತಕ್ಕಂತೆ ಕುಣಿಯಬೇಕಾಗುತ್ತದೆ. ಕೊರೋನ ಬಿಕ್ಕಟ್ಟು ನಮ್ಮ ಅಧಿಕಾರಶಾಹಿಯ ಈ ದೌರ್ಬಲ್ಯವನ್ನು ಬಹಿರಂಗಗೊಳಿಸಿದೆ.

ಸಾಂಪ್ರದಾಯಿಕ ಅಧಿಕಾರಶಾಹಿಯಲ್ಲಿ ಹುದ್ದೆ ಹೆಸರಿಗೆ ಮಾತ್ರವೇ ಹೊರತು ಕಾರ್ಯಕ್ಷಮತೆಗೆ ಅಲ್ಲ; ‘ಪೊಸಿಷನ್’ ಮುಖ್ಯವೇ ಹೊರತು ‘ಫಂಕ್ಷನ್’ ಅಲ್ಲ. ಕಾರ್ಯಕ್ಷಮತೆಯ ನಾಯಕತ್ವದಲ್ಲಿ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ವ್ಯಕ್ತಿಗೆ ಒಂದು ನಿರ್ದಿಷ್ಟ ಜವಾಬ್ದಾರಿ ಇರುತ್ತದೆ; ಆ ಜವಾಬ್ದಾರಿಯ ಕುರಿತು ಎಕ್ಸ್‌ಪರ್ಟ್ ತಿಳಿವಳಿಕೆ ಇರುತ್ತದೆ. ನಾಯಕನ ಪಾತ್ರ ಪರಿಸ್ಥಿತಿಯನ್ನು ವಿವರಿಸಬಹುದೇ ಹೊರತು ಆಜ್ಞೆ ಮಾಡುವುದಲ್ಲ. ಇಂತಹ ನಾಯಕತ್ವ ಇದ್ದಾಗ ಪ್ರತಿಯೊಬ್ಬ ಅಧಿಕಾರಿ ಪರಿಸ್ಥಿತಿಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಾನೆ, ಸ್ಪಂದಿಸುತ್ತಾನೆ; ಒಂದು ನಿರ್ದಿಷ್ಟ ಹುದ್ದೆಯಲ್ಲಿರುವ ಯಾರೋ ಒಬ್ಬ ಅಧಿಕಾರಿಯ ಆಜ್ಞೆಗಾಗಿ ಕಾಯುತ್ತ ಕುಳಿತುಕೊಳ್ಳುವುದಿಲ್ಲ. ನಮ್ಮ ದೇಶದಲ್ಲಿ ಬ್ಯೂರಾಕ್ರಸಿ ಗುರಿಯನ್ನು ತಲುಪಲು ಇರುವ ಒಂದು ಸಾಧನ ಮಾರ್ಗವಾಗದೆ ಅದೇ ಒಂದು ಗುರಿ ಆಗಿದೆ. ಅಲ್ಲದೆ ಜಿಗುಟು ನಿಯಮಗಳಿಗೆ ಅಂಟಿಕೊಳ್ಳಬೇಕಾಗಿರುವುದರಿಂದ ನಾವೀನ್ಯವನ್ನು (ಇನೋವೇಶನ್) ಒಪ್ಪಿಕೊಳ್ಳಲು ನಮ್ಮ ವ್ಯವಸ್ಥೆ ಸಿದ್ಧವಿಲ್ಲ. ಹೀಗಾಗಿ ಕೊರೋನ ಬಿಕ್ಕಟ್ಟಿನ ಕಾಲದಲ್ಲಿಯೂ ನಮಗೆ ಬಂದ ನೆರವು, ನೆರವಿನ ಸಾಮಗ್ರಿಗಳು ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿ ಸಿಕ್ಕಿಕೊಂಡದ್ದರಲ್ಲಿ ಆಶ್ಚರ್ಯವಿಲ್ಲ.

ಭಾರತದಲ್ಲಿ ಅಧಿಕಾರಶಾಹಿಗೆ ಸಂಬಂಧಿಸಿದಂತೆ ಸೂಚಿಸಲಾಗಿರುವ ಸುಧಾರಣೆಯೆಂದರೆ, ನೂತನ ಸಾರ್ವಜನಿಕ ಆಡಳಿತ. ಇದೊಂದು ಆಡಳಿತ ಸುಧಾರಣಾ ಚಳವಳಿ. ಇದರಲ್ಲಿ ಸಾರ್ವಜನಿಕ ಸೇವೆಗಳ ವಿತರಣೆ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಖಾಸಗಿ ರಂಗದ ಆಡಳಿತಾತ್ಮಕ ತಂತ್ರಗಳನ್ನು ಹಾಗೂ ಖಾಸಗೀಕರಣವನ್ನು ಪ್ರೋತ್ಸಾಹಿಸಲಾಗುತ್ತದೆ. ಆದರೆ ಭಾರತದಲ್ಲಿ ಇದು ಎಷ್ಟರಮಟ್ಟಿಗೆ ಯಶಸ್ವಿಯಾದೀತು ಎಂದು ಹೇಳುವುದು ಕಷ್ಟ. ಯಾಕೆಂದರೆ ಸಾರ್ವಜನಿಕ ಸೇವೆಗಳ ಪೂರೈಕೆಯಲ್ಲಿ ಖಾಸಗಿ ರಂಗ ಕೂಡ ಸೋತಿರುವುದನ್ನು ಕೋವಿಡ್-19 ತೋರಿಸಿಕೊಟ್ಟಿದೆ.

ನೂತನ ಸಾರ್ವಜನಿಕ ಆಡಳಿತ ಮಾದರಿಯೇ ಅತ್ಯಂತ ಸರಿಯಾದ, ಸಮರ್ಪಕವಾದ ಆಡಳಿತಾತ್ಮಕ ಸುಧಾರಣೆ. ಈ ಮಾದರಿಯಲ್ಲಿ ಸಾರ್ವಜನಿಕ ರಂಗ, ಖಾಸಗಿ ರಂಗಗಳು ಮತ್ತು ನಾಗರಿಕ ಸಮಾಜ ವಿಶೇಷವಾಗಿ ಎನ್ ಜಿಒಗಳು ಪರಿಣಾಮಕಾರಿ ಸಾರ್ವಜನಿಕ ಸೇವಾ ಪೂರೈಕೆಗೆ ಒಟ್ಟಾಗಿ ಕೆಲಸ ಮಾಡುತ್ತವೆ. ಇಲ್ಲಿ ನೀತಿ ನಿರೂಪಿಸುವಿಕೆ ಹಾಗೂ ಅದರ ಅನುಷ್ಠಾನದಲ್ಲಿ ಸಾರ್ವಜನಿಕ ಅಧಿಕಾರಶಾಹಿಯ ಪ್ರಾಬಲ್ಯವಿರುವುದಿಲ್ಲ. ಕೊರೋನ ಬಿಕ್ಕಟ್ಟಿನ ಈ ಸಮಯದಲ್ಲಿ ಜನರ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜ ಒಂದು ದೊಡ್ಡ ಪಾತ್ರ ವಹಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನೂತನ ಸಾರ್ವಜನಿಕ ಆಡಳಿತದ ಒಂದು ಭಾಗವಾಗಿ ಈ ಪಾತ್ರವನ್ನು ಸ್ವೀಕರಿಸಬೇಕು ಇದಕ್ಕೆ ಅಧಿಕಾರಶಾಹಿಯ ಮನೋಧರ್ಮದಲ್ಲಿ ಬದಲಾವಣೆ ಹಾಗೂ ನಮನೀಯತೆಯ (ಫ್ಲೆಕ್ಸಿಬಲಿಟಿ) ಅಗತ್ಯವಿದೆ. ಜನರಲಿಸ್ಟ್ ಹಾಗೂ ಸ್ಪೆಷಲಿಸ್ಟ್ ಚರ್ಚೆಯನ್ನು ಪುನರಾವಲೋಕಿಸಬೇಕಾಗಿದೆ. ಹಸಿರುಕ್ರಾಂತಿ (ಎಂ. ಎಸ್. ಸ್ವಾಮಿನಾಥನ್), ಶ್ವೇತಕ್ರಾಂತಿ (ವರ್ಗೀಸ್ ಕುರಿಯನ್), ಆಧಾರ್ ಸಂಬಂಧಿತ ಸೇವೆಗಳು (ನಂದನ್ ನಿಲೇಕಣಿ) ಮತ್ತು ಐಟಿ ಕ್ರಾಂತಿ (ಸ್ಯಾಮ್ ಪಿತ್ರೋಡಾ)ಯಂತಹ ಕ್ರಾಂತಿಗಳು ಸಾರ್ವಜನಿಕ ಅಧಿಕಾರಶಾಹಿ ಮತ್ತು ತಥಾಕಥಿತ ಹೊರಗಿನವರಿಂದಲೇ ಬಂದಿದೆ. ಹೀಗಾಗಿ ನೂತನ ಸಾರ್ವಜನಿಕ ಆಡಳಿತವೇ ಭವಿಷ್ಯದ ಆಡಳಿತ. ವಿಶೇಷವಾಗಿ ಸಾರ್ವಜನಿಕ ಸೇವೆಗಳ ಭವಿಷ್ಯದ ಆಡಳಿತ.

ಕೃಪೆ: TheHindu
(ಲೇಖಕರು ಹೊಸದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ.)

Writer - ಝುಬೈರ್ ನಝೀರ್

contributor

Editor - ಝುಬೈರ್ ನಝೀರ್

contributor

Similar News