ಬಿಹಾರ: ನೀರು ಕುಡಿದಿದ್ದಕ್ಕೆ ವಿಕಲಚೇತನ ವ್ಯಕ್ತಿಯನ್ನು ಥಳಿಸಿ ಹತ್ಯೆ

Update: 2021-06-06 05:48 GMT

ಪಾಟ್ನಾ: ಬಿಹಾರದ ಬೆಗುಸರೈ ಜಿಲ್ಲೆಯ ಬಡೆಪುರ ಗ್ರಾಮದಲ್ಲಿ ವಿಕಲಚೇತನ ವ್ಯಕ್ತಿಯೊಬ್ಬ ಬಾಯಾರಿಕೆ ತೀರಿಸಿಕೊಳ್ಳಲು ಒಂದು ಗ್ಲಾಸ್ ನೀರು ಕುಡಿದಿದ್ದಕ್ಕಾಗಿ ಥಳಿಸಿ ಹತ್ಯೆಗೈದಿರುವ ಅಮಾನವೀಯ ಘಟನೆ ವರದಿಯಾಗಿದೆ.

ಥಳಿತದಿಂದ ತೀವ್ರ ಗಾಯಗೊಂಡಿದ್ದ ಚೋಟೆ ಲಾಲ್ ಸಹಾನಿ ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ  ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಶುಕ್ರವಾರ ಕೊನೆಯುಸಿರೆಳೆದರು.

50 ರ ಹರೆಯದ ಚೋಟೆ ಲಾಲ್ ಮೀನುಹಿಡಿಯಲು ತನ್ನ ಹಳ್ಳಿಯ ಹತ್ತಿರದ ಕೊಳಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಚೋಟೆ ಲಾಲ್ ಹಿಂದಿರುಗುವಾಗ ಬಾಯಾರಿಕೆಯಿಂದಾಗಿ ದಿನೇಶ್ ಸಹಾನಿ ಎಂಬ ವ್ಯಕ್ತಿಯ ಸೇರಿದ್ದ ಮಡಕೆಯಿಂದ ಒಂದು ಲೋಟ ನೀರು ಕುಡಿದಿದ್ದಾರೆ.

“ಚೋಟೆ ಲಾಲ್ ನೀರು ಕುಡಿಯುತ್ತಿದ್ದಾಗ, ಇದನ್ನು ನೋಡಿದ ದಿನೇಶ್ ಸಹಾನಿ ಹಾಗೂ ಆತನ ಮಗ ದೀಪಕ್ ಸಹಾನಿ ಲಾಠಿ ಬಳಸಿ ಚೋಟೆ ಲಾಲ್ ಗೆ ನಿರ್ದಯವಾಗಿ ಥಳಿಸಿದ್ದರು. ಚೋಟೆಲಾಲ್  ಇತರ ಗ್ರಾಮಸ್ಥರ ಸಹಾಯದಿಂದ ಮನೆಗೆ ತಲುಪಿದ್ದರು"ಎಂದು ಸ್ಥಳೀಯ ಚೌಹರಿ ಪೊಲೀಸ್ ಠಾಣೆಯ ಉಸ್ತುವಾರಿ ರಾಘವೇಂದ್ರ ಕುಮಾರ್ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಚೋಟೆ ಲಾಲ್ ಸ್ಥಿತಿ ಹದಗೆಟ್ಟಿದ್ದರಿಂದ, ಅವರ ಪತ್ನಿ ಮಿಥಿಲೇಶ್ ದೇವಿ ಅವರನ್ನು ಶುಕ್ರವಾರ ಚಿಕಿತ್ಸೆಗಾಗಿ ಬೆಗುಸರಾಯ್‌ ನ ಸದರ್ ಆಸ್ಪತ್ರೆ ಗೆ ಕರೆದೊಯ್ದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯ ವೈದ್ಯರು ಅವರನ್ನು ಪಿಎಂಸಿಎಚ್‌ಗೆ ಕರೆದೊಯ್ದರು’’ ಎಂದು ಕುಮಾರ್ ಹೇಳಿದ್ದಾರೆ.

ಚೋಟೆ ಲಾಲ್ ಹಾಗೂ  ಅವರ ಕುಟುಂಬ ತುಂಬಾ ಬಡವರಾಗಿದ್ದರಿಂದ, ಗ್ರಾಮಸ್ಥರು ಅವರ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಿ ಪಿಸಿಎಂಎಚ್‌ಗೆ ಕಳುಹಿಸಿದ್ದರು, ಅಲ್ಲಿ ಅವರು ತೀವ್ರ ಸ್ವರೂಪದ ಗಾಯದಿಂದ ಮೃತಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News