ಮ್ಯಾನ್ಮಾರ್: ಸೈನಿಕರ ವಿರುದ್ಧ ಬಂದೂಕುಗಳೊಂದಿಗೆ ಹೋರಾಡಿದ ಗ್ರಾಮಸ್ಥರು

Update: 2021-06-06 16:21 GMT
ಸಾಂದರ್ಭಿಕ ಚಿತ್ರ

ಯಾಂಗನ್ (ಮ್ಯಾನ್ಮಾರ್), ಜೂ. 6: ಮ್ಯಾನ್ಮಾರ್ ನ ಅಯೆಯರ್ವಡಿ ವಲಯದ ಕ್ಯೋನ್ ಪಾವ್ ಎಂಬ ಗ್ರಾಮದಲ್ಲಿ ಜನರು ಶನಿವಾರ ಸೇನಾಡಳಿತವನ್ನು ವಿರೋಧಿಸಿ ಮನೆಯಲ್ಲೇ ನಿರ್ಮಿಸಲಾದ ಬಂದೂಕುಗಳೊಂದಿಗೆ ಸೈನಿಕರ ವಿರುದ್ಧ ಹೋರಾಡಿದ್ದಾರೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ. ಹೋರಾಟದಲ್ಲಿ ಕನಿಷ್ಠ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ. ಆದರೆ, ಕನಿಷ್ಠ 12 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಮ್ಯಾನ್ಮಾರ್ ಸೇನೆಯು ಫೆಬ್ರವರಿ 1ರಂದು ಆಂಗ್ ಸಾನ್ ಸೂ ಕಿ ನೇತೃತ್ವದ ನಾಗರಿಕ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರವನ್ನು ಕಬಳಿಸಿದ ಬಳಿಕ ದೇಶದಲ್ಲಿ ಅಸ್ಥಿರತೆ ನೆಲೆಸಿದೆ ಹಾಗೂ ಅದರ ಆರ್ಥಿಕ ಬೆಳವಣಿಗೆ ಸ್ಥಗಿತಗೊಂಡಿದೆ. ಸೇನಾಡಳಿತವನ್ನು ವಿರೋಧಿಸಿ ಅಂದಿನಿಂದ ನಡೆಯುತ್ತಿರುವ ಪ್ರತಿಭಟನೆಗಳನ್ನು ಸೇನೆಯು ಬಲಪ್ರಯೋಗಿಸಿ ನಿರ್ದಯವಾಗಿ ಹತ್ತಿಕ್ಕಿದೆ.

ಕ್ಯೋನ್ ಪ್ಯಾವ್ ಗ್ರಾಮದ ‘ಸ್ಥಳೀಯ ರಕ್ಷಣಾ ಪಡೆ’ಯ ಸದಸ್ಯರನ್ನು ಬಂಧಿಸಲು ನೂರಕ್ಕೂ ಅಧಿಕ ಸೈನಿಕರು ಬಂದಾಗ ಗ್ರಾಮಸ್ಥರು ಪ್ರತಿದಾಳಿ ನಡೆಸಿದರು ಎಂದು ಓರ್ವ ಗ್ರಾಮಸ್ಥ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ನಾಲ್ಕು ವರ್ಷ ಪ್ರಾಯದ ಮಗು ಸೇರಿದಂತೆ 12 ನಾಗರಿಕರು ಸೈನಿಕರ ದಾಳಿಯಲ್ಲಿ ಮೃತಪಟ್ಟರು ಎಂದು ಓರ್ವ ನಿವಾಸಿ ಹೇಳಿದರು.

‘‘ಗ್ರಾಮಸ್ಥರಲ್ಲಿ ಸಾಕಷ್ಟು ಆಯುಧಗಳು ಮತ್ತು ಹೋರಾಟ ನಡೆಸಲು ಜನರಿಲ್ಲ. ಹೆಚ್ಚಿನವರು ಓಡಿ ಹೋಗಿದ್ದಾರೆ’’ ಎಂದರು.
ಹೋರಾಟದಲ್ಲಿ ಓರ್ವ ಸೈನಿಕನೂ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News