×
Ad

ಬಿಜೆಪಿಯ ಆಸಕ್ತಿ ಕಳೆದುಕೊಂಡ ಟ್ವಿಟರ್ ಈಗ ಸರಕಾರಕ್ಕೆ ಹೊರೆಯಾಗಿದೆ: ಶಿವಸೇನೆ

Update: 2021-06-07 20:31 IST

 ಮುಂಬೈ,ಜೂ.7: ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ನಡುವೆ ನಡೆಯುತ್ತಿರುವ ಕಚ್ಚಾಟದ ನಡುವೆಯೇ ಶಿವಸೇನೆಯ ಮುಖವಾಣಿ ‘ಸಾಮನಾ’ ಟ್ವಿಟರ್ ಬಿಜೆಪಿಯ ರಾಜಕೀಯ ಆಸಕ್ತಿಯನ್ನು ಕಳೆದುಕೊಂಡಿದ್ದು,ಅದೀಗ ಸರಕಾರಕ್ಕೆ ಹೊರೆಯಾಗಿ ಪರಿಣಮಿಸಿದೆ ಮತ್ತು ಸರಕಾರವು ಈ ಹೊರೆಯನ್ನು ಕಿತ್ತೆಸೆಯಲು ಬಯಸಿದೆ ಎಂದು ತನ್ನ ಸೋಮವಾರದ ಸಂಚಿಕೆಯ ಸಂಪಾದಕೀಯದಲ್ಲಿ ಹೇಳಿದೆ.

ಈ ಹಿಂದೆ ಟ್ವಿಟರ್ ಬಿಜೆಪಿ ಅಥವಾ ಮೋದಿ ಸರಕಾರದ ರಾಜಕೀಯ ಹೋರಾಟ ಅಥವಾ ಪ್ರಚಾರ ಅಭಿಯಾನದ ಆತ್ಮವಾಗಿತ್ತು. ಟ್ವಿಟರ್ ಈಗ ಅವರಿಗೆ ಹೊರೆಯಾಗಿದೆ ಮತ್ತು ಮೋದಿ ಸರಕಾರವು ಅದನ್ನು ದೇಶದಿಂದ ಹೊರದಬ್ಬಬೇಕೇ ಎಂದು ನಿರ್ಧರಿಸುವ ಮಟ್ಟಕ್ಕೂ ತಲುಪಿದೆ. ಇಂದು ಟ್ವಿಟರ್ ನಂತಹ ಮಾಧ್ಯಮಗಳನ್ನು ಹೊರತುಪಡಿಸಿ ದೇಶದಲ್ಲಿಯ ಎಲ್ಲ ಮಾಧ್ಯಮಗಳು ಮೋದಿ ಸರಕಾರದ ಸಂಪೂರ್ಣ ನಿಯಂತ್ರಣದಲ್ಲಿವೆ ಎಂದು ಸಂಪಾದಕೀಯದಲ್ಲಿ ಹೇಳಿರುವ ಶಿವಸೇನೆಯು,ತನ್ನ ಸುಳ್ಳು ಪ್ರಚಾರಗಳಿಗೆ ಉತ್ತರಿಸಲು ಪ್ರತಿಪಕ್ಷಗಳು ಆರಂಭಿಸಿರುವುದರಿಂದ ಬಿಜೆಪಿ ಈಗ ಟ್ವಿಟರ್ನಲ್ಲಿ ರಾಜಕೀಯ ಆಸಕ್ತಿಯನ್ನು ಹೊಂದಿಲ್ಲ. 

ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕೆಸರೆರಚಾಟ ಮತ್ತು ಚಾರಿತ್ರಹನನ ಎಗ್ಗಿಲ್ಲದೆ ನಡೆಯುತ್ತಿದ್ದವು. ಟ್ವಿಟರ್ ಅನ್ನು ಹೇಗೆ ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎನ್ನುವುದು ಬಿಜೆಪಿಯನ್ನು ಬಿಟ್ಟು ಇತರ ರಾಜಕೀಯ ಪಕ್ಷಗಳಿಗೆ ಗೊತ್ತಿರಲಿಲ್ಲ. 2014ರಲ್ಲಿ ಬಿಜೆಪಿ ಇದನ್ನು ಕರಗತಗೊಳಿಸಿಕೊಂಡಿತ್ತು. ಆ ವರ್ಷ ನಡೆದಿದ್ದ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಸೈನ್ಯವು ಸೈಬರ್ ಲೋಕದಲ್ಲಿಯೇ ಹೆಚ್ಚು ಕ್ರಿಯಾಶೀಲವಾಗಿತ್ತು ಎಂದಿದೆ.

ಯಾವ ನಿಯಮಗಳಡಿ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಶಬ್ದಗಳನ್ನು ಬಳಸಲಾಗಿತ್ತು? ಡಾ.ಮನಮೋಹನ್ ಸಿಂಗ್ ರಂತಹ ಹಿರಿಯ ನಾಯಕರನ್ನು ಯಾವ್ಯಾವ ವಿಶೇಷಣಗಳಿಂದ ಕರೆಯಲಾಗಿತ್ತು? ಉದ್ಧವ್ ಠಾಕ್ರೆಯವರಿಂದ ಹಿಡಿದು ಮಮತಾ ಬ್ಯಾನರ್ಜಿ,ಶರದ್ ಪವಾರ್ ರವರೆಗೆ ರಾಜಕೀಯ ನಾಯಕರ ಚಾರಿತ್ರ ಹನನ ಅಭಿಯಾನವನ್ನೇ ಆರಂಭಿಸಲಾಗಿತ್ತು ಎಂದಿರುವ ಸಾಮನಾ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಮೋದಿ ನೇತೃತ್ವದ ಸರಕಾರವನ್ನು ಟೀಕಿಸಲು ಟ್ವಿಟರ್ ನಂತಹ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ಇದಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದೆ. 

ಇಂತಹ ದಾಳಿಗಳು ಏಕಪಕ್ಷೀಯವಾಗಿರುವವರೆಗೆ ಬಿಜೆಪಿ ಸದಸ್ಯರು ಖಷಿಯಾಗಿಯೇ ಇದ್ದರು. ಆದರೆ ಪ್ರತಿಪಕ್ಷಗಳೂ ಅಷ್ಟೇ ಸಮರ್ಥ ಸೈಬರ್ ಪಡೆಗಳನ್ನು ನಿಯೋಜಿಸುವ ಮೂಲಕ ದಾಳಿಗಳನ್ನು ಆರಂಭಿಸಿದ ಬಳಿಕ ಬಿಜೆಪಿಯಲ್ಲಿ ಅಳುಕು ಉಂಟಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News