ಶ್ರೀನಗರ: ಕೊರೋನದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುತ್ತಿರುವ 24ರ ಹರೆಯದ ಶಬೀರ್‌ ಅಹ್ಮದ್

Update: 2021-06-07 17:41 GMT

ಶ್ರೀನಗರ, ಜೂ. 7: ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸಲು ಮುಸ್ಲಿಮೇತರ ಕುಟುಂಬಕ್ಕೆ ನೆರವು ನೀಡುವ ಮೂಲಕ ಶ್ರೀನಗರದ ಯುವಕನೋರ್ವ ಪ್ರಶಂಸೆಗೆ ಪಾತ್ರನಾಗಿದ್ದಾನೆ.

ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭ ತನ್ನ ತಂದೆಯ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 24ರ ಹರೆಯದ ಶಬೀರ್ ಅಹ್ಮದ್, ‘‘ತಾನು ಕಳೆದ 9 ತಿಂಗಳಲ್ಲಿ 60ರಿಂದ 70 ಪಾರ್ಥಿವ ಶರೀರಗಳ ಅಂತ್ಯಕ್ರಿಯೆ ನಡೆಸಿದ್ದೇನೆ’’ ಎಂದು ಹೇಳಿದ್ದಾರೆ.

‘‘ನಾನು ನನ್ನ ತಂದೆಯ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುತ್ತಿದ್ದೇನೆ. ಸ್ಮಶಾನವನ್ನು ಕಾಯುವುದು ನನ್ನ ಕೆಲಸ’’ ಎಂದು ಅಹ್ಮದ್ ತಿಳಿಸಿದ್ದಾರೆ.

ಶ್ರೀನಗರದಲ್ಲಿ ಕುಟುಂಬದ ಸದಸ್ಯರು ಇಲ್ಲದ ಹೊರಗಿನವರ ಕೆಲವು ಮೃತದೇಹಗಳನ್ನು ಕೂಡ ಪೊಲೀಸರು ಇಲ್ಲಿಗೆ ತರುತ್ತಿದ್ದಾರೆ. ಶ್ರೀನಗರದ ಬಾಟಮೂಲ ಪ್ರದೇಶದಲ್ಲಿರುವ ಸನಾತನ ಧರ್ಮ ಟ್ರಸ್ಟ್ ನಿರ್ವಹಿಸುತ್ತಿರುವ ಸ್ಮಶಾನದಲ್ಲಿ ಇಬ್ಬರು ಪೂಜಾರಿಗಳು ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘‘ಸೌದೆ ಹಾಗೂ ಇತರ ವಸ್ತುಗಳನ್ನು ನಾನು ವ್ಯವಸ್ಥೆ ಮಾಡುತ್ತೇನೆ. ಕೊರೋನ ನಮ್ಮ ಪ್ರೀತಿ ಪಾತ್ರರಾದವನ್ನು ಸೆಳೆದೊಯ್ಯುತ್ತಿರುವ ಇಂದಿನ ಸತ್ವ ಪರೀಕ್ಷೆಯ ದಿನಗಳಲ್ಲಿ ನಾವು ಪರಸ್ಪರ ನೆರವು ನೀಡಬೇಕು ಎಂಬ ಮಾನವೀಯ ನೆಲೆಯಿಂದ ಈ ಕೆಲಸ ನಿರ್ವಹಿಸುತ್ತಿದ್ದೇನೆ’’ ಎಂದು ಈಗಷ್ಟೇ ಪಿಪಿಇ ಕಿಟ್ ಸ್ವೀಕರಿಸಿರುವ ಅಹ್ಮದ್ ಹೇಳಿದ್ದಾರೆ.

ಕುಟುಂಬದ ವಿರೋಧದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘‘ಕುಟುಂಬದ ಸದಸ್ಯರು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಹಲವು ಕುಟುಂಬಗಳು ನನ್ನ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿವೆ. ಅಲ್ಲದೆ ನಾನು ಪುಣ್ಯದ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ’’ ಎಂದಿದ್ದಾರೆ.

‘‘ಅಮೂಲ್ಯವಾದ ಜೀವ ಉಳಿಸಲು ವೈದ್ಯರು ಹಾಗೂ ಮುಂಚೂಣಿ ಕಾರ್ಯಕರ್ತರು ಕಳೆದ ವರ್ಷದಿಂದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನ ವಿರುದ್ಧ ಹೋರಾಡುವಲ್ಲಿ ನಾನು ಸ್ಪಲ್ಪ ಮಾತ್ರವೇ ಶ್ರಮಿಸುತ್ತಿದ್ದೇನೆ’’ ಎಂದು ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News