×
Ad

ಕೇಂದ್ರದ ಸೂಚನೆಯ ಮೇರೆಗೆ ಗಾಯಕ ಜಾಝ್ಝಿ ಬಿ, ಇತರ ಮೂವರ ಖಾತೆಗಳನ್ನು ಸ್ಥಗಿತಗೊಳಿಸಿದ ಟ್ವಿಟರ್

Update: 2021-06-08 19:55 IST
photo: Instagram(@jazzyb)

ಹೊಸದಿಲ್ಲಿ,ಜೂ.8: ಟ್ವಿಟರ್ ಕೆನೆಡಿಯನ್-ಪಂಜಾಬಿ ಗಾಯಕ ಜಾಝ್ಝಿ ಬಿ ಸೇರಿದಂತೆ ನಾಲ್ವರ ಖಾತೆಗಳನ್ನು ಭಾರತದಲ್ಲಿ ಸ್ಥಗಿತಗೊಳಿಸಿದೆ. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಆಗಾಗ್ಗೆ ಟ್ವೀಟಿಸುವ ಜಾಝ್ಝಿ ಕಳೆದ ಡಿಸೆಂಬರ್ನಲ್ಲಿ ದಿಲ್ಲಿ ಗಡಿಯಲ್ಲಿ ಅವರನ್ನು ಭೇಟಿಯಾಗಿದ್ದರು.

ಕೇಂದ್ರ ಸರಕಾರವು ನಾಲ್ಕು ಖಾತೆಗಳನ್ನು ಸ್ಥಗಿತಗೊಳಿಸುವಂತೆ ರವಿವಾರ ಟ್ವಿಟರ್ ಗೆ ಕಾನೂನಾತ್ಮಕ ಸೂಚನೆಯನ್ನು ನೀಡಿತ್ತು. ಈ ಖಾತೆಗಳು ಭಾರತದಲ್ಲಿ ಲಭ್ಯವಿಲ್ಲವಾದರೂ ದೇಶದ ಹೊರಗೆ ಮುಕ್ತವಾಗಿವೆ.
 
ಹಿಪ್-ಹಾಪ್ ಕಲಾವಿದ ಎಲ್-ಫ್ರೆಷ್ ದಿ ಲಯನ್,ಯುವ ಸಂಘಟನೆ ಕ್ಯಾಲಿಫೋರ್ನಿಯಾ ಸಿಖ್ ಯುತ್ ಅಲೈಯನ್ಸ್ ಮತ್ತು ಇನ್ನೋರ್ವ ಬಳಕೆದಾರನ ಖಾತೆಗಳು ಟ್ವಿಟರ್ ಭಾರತದಲ್ಲಿ ಸ್ಥಗಿತಗೊಳಿಸಿರುವ ಇತರ ಮೂರು ಖಾತೆಗಳಾಗಿವೆ.

ಎಲ್ಲ ನಾಲ್ಕೂ ಖಾತೆಗಳು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದವು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಏಳು ವರ್ಷಗಳ ಆಡಳಿತವನ್ನು ಟೀಕಿಸಿದ್ದವು ಎಂದು ತಂತ್ರಜ್ಞಾನ ಸುದ್ದಿ ಜಾಲತಾಣ ಟೆಕ್ಕ್ರಂಚ್ ತಿಳಿಸಿದೆ.

 
ಖಾತೆಯೊಂದಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಸೂಚನೆ ಸ್ವೀಕರಿಸಿದರೆ ತಾನು ಸದ್ರಿ ಖಾತೆಯನ್ನು ಟ್ವಿಟರ್ ನಿಯಮಗಳು ಮತ್ತು ಸ್ಥಳೀಯ ಕಾನೂನುಗಳಡಿ ಪರಿಶೀಲಿಸುತ್ತೇನೆ. ಖಾತೆಯಲ್ಲಿ ವಿಷಯವು ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದ್ದರೆ ಅದನ್ನು ಸೇವೆಯಿಂದ ತೆಗೆಯಲಾಗುತ್ತದೆ. ನಿರ್ದಿಷ್ಟ ಪ್ರದೇಶ ವ್ಯಾಪ್ತಿಯಲ್ಲಿ ಅದು ಕಾನೂನುಬಾಹಿರವಾಗಿದ್ದರೆ ಮತ್ತು ಟ್ವಿಟರ್ ನಿಯಮವನ್ನು ಉಲ್ಲಂಘಿಸಿರದಿದ್ದರೆ ಅದನ್ನು ನಾವು ಭಾರತದಲ್ಲಿ ಮಾತ್ರ ತಡೆಹಿಡಿಯಬಹುದು ಎಂದು ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದೆ.

ನೂತನ ಐಟಿ ನಿಯಮಗಳ ಪಾಲನೆ ಕುರಿತಂತೆ ಟ್ವಿಟರ್ ಮತ್ತು ಕೇಂದ್ರದ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ. ತನ್ಮಧ್ಯೆ ಟ್ವಿಟರ್ ಕೊರೋನವೈರಸ್ ಸಾಂಕ್ರಾಮಿಕವನ್ನು ಉಲ್ಲೇಖಿಸಿ,ನಿಯಮಗಳ ಪಾಲನೆಗೆ ಹೆಚ್ಚಿನ ಸಮಯಾವಕಾಶವನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News