×
Ad

ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೇಂದ್ರದ ಧೋರಣೆ 'ಸರ್ಜಿಕಲ್ ಸ್ಟ್ರೈಕ್'ನಂತಿರಬೇಕು: ಬಾಂಬೆ ಹೈಕೋರ್ಟ್

Update: 2021-06-09 17:36 IST

ಮುಂಬೈ : ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೇಂದ್ರದ ಧೋರಣೆ ʼಸರ್ಜಿಕಲ್ ಸ್ಟ್ರೈಕ್' ನಂತಿರಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಎಪ್ಪತ್ತೈದು ವರ್ಷ ಮೇಲ್ಪಟ್ಟ ನಾಗರಿಕರಿಗೆ ಹಾಗೂ ಹಾಸಿಗೆ ಹಿಡಿದವರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಬಿಎಂಸಿಗೆ ಸೂಚಿಸಬೇಕು ಎಂದು ಕೋರಿ ವಕೀಲರುಗಳಾದ ಧೃತಿ ಕಪಾಡಿಯಾ ಹಾಗೂ ಕುನಾಲ್ ತಿವಾರಿ ಅವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಸಂದರ್ಭ ನ್ಯಾಯಾಲಯ ಮೇಲಿನಂತೆ ಹೇಳಿದೆ.

"ಕೊರೋನಾವೈರಸ್ ನಮ್ಮ ಅತ್ಯಂತ ದೊಡ್ಡ ವೈರಿ.  ಈ ವೈರಿ ಕೆಲ ಪ್ರದೇಶಗಳಲ್ಲಿ ವಾಸವಾಗಿದೆ ಹಾಗೂ ಕೆಲ ಜನರಿಗೆ ಅದರಿಂದ ಹೊರಬರಲು ಆಗುತ್ತಿಲ್ಲ. ನಿಮ್ಮ ಧೋರಣೆ ಸರ್ಜಿಕಲ್ ಸ್ಟ್ರೈಕ್ ನಂತಿರಬೇಕು, ನೀವು ಗಡಿಯಲ್ಲಿ ನಿಂತುಕೊಂಡು ವೈರಸ್ ಹೊಂದಿರುವವರು ನಿಮ್ಮ ಬಳಿ ಬರಲು ಕಾಯುತ್ತಿದ್ದೀರಿ, ನೀವು  ವೈರಿ ಪ್ರದೇಶ ಪ್ರವೇಶಿಸುತ್ತಿಲ್ಲ" ಎಂದು ನ್ಯಾಯಾಲಯ ಹೇಳಿತು.

ಮನೆ ಮನೆಗೆ ತೆರಳಿ ಲಸಿಕೆ ನೀಡಲು ಕೇಂದ್ರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಬಿಎಂಸಿ ನೀಡಿದ ಪ್ರತಿಕ್ರಿಯೆಯನ್ನೂ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತ ಗಣನೆಗೆ ತೆಗೆದುಕೊಂಡಿದ್ದಾರೆ.

ಕೇರಳ ಮತ್ತಿತರ ರಾಜ್ಯಗಳು ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಸಿಗೆ ಹಿಡಿದವರಿಗೆ ನೀಡುತ್ತಿದೆ ಎಂದು ಅಪೀಲುದಾರರು ಹೇಳಿದಾಗ ಪ್ರತಿಕ್ರಿಯಿಸಿದ ನ್ಯಾಯಾಲಯ, "ನೀವು ಇಡೀ ದೇಶಕ್ಕೆ ಮಾದರಿ ಎಂದು  ನಾವು ಹೇಳುತ್ತಿದ್ದೇವೆ. ಕೇರಳ ಸರಕಾರ ಕೇಂದ್ರದ ಅನುಮತಿಗೆ ಕಾದಿತ್ತೇ?" ಎಂದು ಪ್ರಶ್ನಿಸಿದೆ.

ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ಕೆ ವಿಳಂಬವೇಕೆ ಎಂದು ನ್ಯಾಯಾಲಯ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆಯಲ್ಲದೆ ಕೇಂದ್ರದ ಅನುಮತಿಗೆ ಬಿಎಂಸಿ ಏಕೆ ಕಾಯಬೇಕು ಎಂದೂ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News