ಭಾರತದಲ್ಲಿ ಲಸಿಕೆಯ ಕೊರತೆ ಹಿಂದಿನಿಂದಲೂ ಇತ್ತು ಎನ್ನುವ ಪ್ರಧಾನಿ ಮೋದಿ ಮಾತು ಸುಳ್ಳು ಎನ್ನುತ್ತಿರುವ ಇತಿಹಾಸ

Update: 2021-06-09 13:41 GMT

ಸೋಮವಾರ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಲಸಿಕೀಕರಣದ ಇತಿಹಾಸದ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯ ಸತ್ಯಕ್ಕೆ ದೂರವಾಗಿದೆ. ‘ಭಾರತದ ಲಸಿಕೀಕರಣದ ಇತಿಹಾಸವನ್ನು ನೋಡಿದರೆ,ಅದು ಸಿಡುಬು,ಹೆಪಟೈಟಿಸ್ ಬಿ(ಯಕೃತ್ತಿನ ಉರಿಯೂತ) ಅಥವಾ ಪೋಲಿಯೊ ಲಸಿಕೆ ಆಗಿರಲಿ,ವಿದೇಶಗಳಿಂದ ಲಸಿಕೆಗಳನ್ನು ತರಿಸಿಕೊಳ್ಳಲು ಭಾರತವು ದಶಕಗಳ ಕಾಲ ಕಾಯಬೇಕಿತ್ತು ಎನ್ನುವುದು ಗೊತ್ತಾಗುತ್ತದೆ. ಇತರ ದೇಶಗಳಲ್ಲಿ ಲಸಿಕೀಕರಣ ಕಾರ್ಯಕ್ರಮ ಕೊನೆಗೊಂಡರೂ ನಮ್ಮ ದೇಶದಲ್ಲಿ ಅದಿನ್ನೂ ಆರಂಭವೇ ಆಗುತ್ತಿರಲಿಲ್ಲ ’ಎಂದು ಮೋದಿ ತನ್ನ ಭಾಷಣದಲ್ಲಿ ಹೇಳಿದ್ದರು.
 
ಸ್ವಾತಂತ್ರಪೂರ್ವದಿಂದಲೂ ಭಾರತವು ಲಸಿಕೆಗಳು ಅಭಿವೃದ್ಧಿಗೊಂಡ ಕೆಲವೇ ವರ್ಷಗಳಲ್ಲಿ ಅವುಗಳನ್ನು ದೇಶಿಯವಾಗಿ ತಯಾರಿಸುತ್ತಿದ್ದ ರಾಷ್ಟ್ರಗಳಲ್ಲಿ ಒಂದಾಗಿತ್ತು ಎಂದು ಐತಿಹಾಸಿಕ ದಾಖಲೆಗಳು ಬೆಟ್ಟು ಮಾಡುತ್ತಿವೆ. ಲಸಿಕೀಕರಣ ಕಾರ್ಯಕ್ರಮಗಳಲ್ಲಿ ಹಲವಾರು ಸವಾಲುಗಳಿದ್ದರೂ ದೇಶದಲ್ಲಿ ಲಸಿಕೆಯ ಕೊರತೆಯಿರಲಿಲ್ಲ ಎನ್ನುವುದನ್ನೂ ಇತಿಹಾಸವು ಹೇಳುತ್ತಿದೆ.

ಸಿಡುಬು ಲಸಿಕೆ
 
ದನಗಳಲ್ಲಿ ಕಾಣಿಸಿಕೊಳ್ಳುವ ಸಿಡುಬಿನ ವೈರಸ್ ಬಳಸಿ ಲಸಿಕೆಯನ್ನು ಅಭಿವೃದ್ಧಿಗೊಳಿಸಿದ್ದ ಬ್ರಿಟನ್ನಿನ ವೈದ್ಯ ಎಡ್ವರ್ಡ್ ಜೆನ್ನರ್ ಅವರು ತಾನು ಮನುಷ್ಯರ ಮೇಲೆ ನಡೆಸಿದ್ದ ಈ ಲಸಿಕೆಯ ಪ್ರಯೋಗಗಳ ಫಲಿತಾಂಶಗಳನ್ನು ಪ್ರಕಟಿಸಿದ್ದ ಕೇವಲ ನಾಲ್ಕೇ ವರ್ಷಗಳಲ್ಲಿ ಅಂದರೆ 1802ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಸಿಡುಬಿನ ಲಸಿಕೆಯನ್ನು ಮೂರು ವರ್ಷದ ಮಗುವಿಗೆ ನೀಡಲಾಗಿತ್ತು ಎಂದು ಡಾ.ಚಂದ್ರಕಾಂತ್ ಲಹರಿಯಾ 2012ರಲ್ಲಿ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್ (ಐಜೆಎಂಆರ್)ನಲ್ಲಿ ಪ್ರಕಟಗೊಂಡಿದ್ದ ತನ್ನ ‘ಭಾರತದಲ್ಲಿ ಲಸಿಕೀಕರಣ ಇತಿಹಾಸ ’ಪ್ರಬಂಧದಲ್ಲಿ ಹೇಳಿದ್ದಾರೆ.

1850ರವರೆಗೂ ಭಾರತದಲ್ಲಿ ಸಿಡುಬಿನ ಲಸಿಕೆಯನ್ನು ವಿದೇಶಗಳಿಂಂದ ಆಮದು ಮಾಡಿಕೊಳ್ಳಲಾಗುತ್ತಿತ್ತು, ಆದರೆ ದ್ರವರೂಪದ ಲಸಿಕೆಯನ್ನು ಸಂರಕ್ಷಿಸಿಡುವುದೇ ಒಂದು ಸವಾಲು ಆಗಿತ್ತು. ಹೀಗಾಗಿ ಭಾರತೀಯ ಸಂಸ್ಥೆಗಳು ಲಸಿಕೆ ಪೂರೈಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಆರಂಭಿಸಿದ್ದವು. 1890ರಲ್ಲಿ ಶಿಲ್ಲಾಂಗ್ ನಲ್ಲಿ ದೇಶದ ಮೊದಲ ಪ್ರಾಣಿ ಲಸಿಕೆ ಡಿಪೋ ಸ್ಥಾಪನೆಗೊಂಡಿತ್ತು ಮತ್ತು ಅದು ಲಸಿಕೆಗಳ ಉತ್ಪಾದನೆಯನ್ನು ಆರಂಭಿಸಿತ್ತು.
   
ದೇಶದಲ್ಲಿ ಲಸಿಕೀಕರಣ ಆರಂಭಗೊಂಡ ಬಳಿಕ ಅದು ಎಂದೂ ನಿಂತಿಲ್ಲವಾದರೂ, ಅದರ ಜನಪ್ರಿಯತೆಯಲ್ಲಿ ಏರುಪೇರುಗಳು ಉಂಟಾಗುತ್ತಲೇ ಇರುತ್ತಿದ್ದವು. ಲಸಿಕೆಯ ಬಗ್ಗೆ ಹಿಂಜರಿಕೆ, ವಿರೋಧದ ಸವಾಲುಗಳೂ ಎದುರಾಗುತ್ತಿದ್ದವು. ಹೀಗಾಗಿ ಲಸಿಕೀಕರಣ ಕಾರ್ಯಕ್ರಮಕ್ಕೆ ಹಿನ್ನಡೆಯುಂಟಾಗಿತ್ತು ಮತ್ತು 1944-45ರಲ್ಲಿ ಭಾರತದಲ್ಲಿ ಹಿಂದಿನ ಎರಡು ದಶಕಗಳಲ್ಲಿಯೇ ಗರಿಷ್ಠ ಸಂಖ್ಯೆಯ ಸಿಡುಬು ಪ್ರಕರಣಗಳು ವರದಿಯಾಗಿದ್ದವು. ದ್ವಿತೀಯ ಮಹಾಯುದ್ಧವು ಅಂತ್ಯಗೊಂಡ ಬೆನ್ನಿಗೇ ಸಿಡುಬಿಗೆ ಲಸಿಕೆಯನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಲಾಗಿತ್ತು ಮತ್ತು ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು. 1947ರಲ್ಲಿ ಭಾರತವು ಸಿಡುಬಿನ ಲಸಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿತ್ತು ಎಂದು ಡಾ.ಲಹರಿಯಾ ಬರೆದಿದ್ದಾರೆ.

1953ರ ವೇಳೆಗೆ ಉತ್ತರ ಅಮೆರಿಕ ಮತ್ತು ಯುರೋಪ್ ಗಳಲ್ಲಿ ಸಿಡುಬು ರೋಗವು ನಿರ್ಮೂಲನಗೊಂಡಿತ್ತು. 1959ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವವನ್ನು ಸಿಡುಬು ಮುಕ್ತವಾಗಿಸಲು ಕಾರ್ಯಕ್ರಮವನ್ನು ಆರಂಭಿಸಿತ್ತು. 1971ರಲ್ಲಿ ದಕ್ಷಿಣ ಅಮೆರಿಕ, 1975ರಲ್ಲಿ ಭಾರತ ಸೇರಿದಂತೆ ಏಷ್ಯಾ ಮತ್ತು 1977ರಲ್ಲಿ ಆಫ್ರಿಕಾ ಸಿಡುಬಿನಿಂದ ಮುಕ್ತಿ ಪಡೆದಿದ್ದವು. ಈ ಎಲ್ಲ ವರ್ಷಗಳಲ್ಲಿ ಲಸಿಕೆಯ ಲಭ್ಯತೆ ಎಂದೂ ಸವಾಲಾಗಿರಲಿಲ್ಲ, ಲಸಿಕೀಕರಣದ ಸುತ್ತಲಿನ ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಸವಾಲಾಗಿ ಕಾಡಿದ್ದವು ಎಂದಿದ್ದಾರೆ ಡಾ.ಲಹರಿಯಾ.

ಪೋಲಿಯೊ ಸಂಶೋಧನೆಯಲ್ಲಿ ಹರಿಕಾರ ಭಾರತದಲ್ಲಿ ಪೋಲಿಯೊ ಲಸಿಕೀಕರಣದ ಇತಿಹಾಸವು ಹೆಚ್ಚು ಸಂಕೀರ್ಣವಾಗಿದೆ. ಭಾರತವು ಪೋಲಿಯೊ ಸಂಶೋಧನೆ, ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಲಸಿಕೆಯ ಮೂಲಕ ಸೋಂಕುತಡೆ ಹಾಗೂ ಬಾಯಿಯ ಮತ್ತು ಚುಚ್ಚುಮದ್ದಿನ ಮೂಲಕ ನೀಡುವ ಪೋಲಿಯೊ ಲಸಿಕೆಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿತ್ತು. ಆದರೆ ನಂತರದ ವರ್ಷಗಳಲ್ಲಿ ದೂರದೃಷ್ಟಿಯಿಲ್ಲದ ನೀತಿಗಳು ಮತ್ತು ಅಬದ್ಧ ನಿರ್ಧಾರಗಳಿಂದಾಗಿ ಭಾರತವು ತನ್ನ ಮುಂಚೂಣಿ ಸ್ಥಾನದಿಂದ ಕುಸಿದಿತ್ತು ಮತ್ತು ಇದು ಸಾರ್ವಜನಿಕ ಆರೋಗ್ಯದ ನಮ್ಮ ಇತಿಹಾಸದಲ್ಲಿ ಕಳಂಕವಾಗಿತ್ತು ಎಂದು ಟಿ.ಜಾಕೋಬ್ ಜಾನ್ ಮತ್ತು ಎಂ.ವಿಪಿನ್ ವಶಿಷ್ಠ ಅವರು ಐಜೆಎಂಆರ್ನ 2013ರ ಸಂಚಿಕೆಯಲ್ಲಿ ಬರೆದಿದ್ದರು.
 
ಅಮೆರಿಕದಲ್ಲಿ ಜೋನಾಸ್ ಸಾಕ್ ಅಭಿವೃದ್ಧಿಗೊಳಿಸಿದ್ದ ನಿಷ್ಕ್ರಿಯ ಪೋಲಿಯೊ ಲಸಿಕೆಯನ್ನು ಪೋಲಿಯೊ ನಿವಾರಣೆ ಅಭಿಯಾನದಲ್ಲಿ ಯಶಸ್ವಿಯಾಗಿ ಬಳಸಲಾಗಿತ್ತು. ಕೆಲವು ಐರೋಪ್ಯ ರಾಷ್ಟ್ರಗಳೂ ಈ ಲಸಿಕೆಯನ್ನು ಅಳವಡಿಸಿಕೊಂಡಿದ್ದವು. 1960ರಲ್ಲಿ ಬಾಯಿಯ ಮೂಲಕ ನೀಡುವ ಪೋಲಿಯೊ ಲಸಿಕೆ (ಒಪಿವಿ)ಯು ಅಭಿವೃದ್ಧಿಗೊಂಡು ಹೆಚ್ಚು ಜನಪ್ರಿಯವಾಗಿತ್ತು.
ಭಾರತದಲ್ಲಿ 1970ರಲ್ಲಿ ಪ್ಯಾಷ್ಚರ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮೊದಲ ಬಾರಿಗೆ 1970ರಲ್ಲಿ ಸ್ವದೇಶಿ ಒಪಿವಿ ಅನ್ನು ತಯಾರಿಸಿತ್ತು. ಲಸಿಕೆಯ ತಯಾರಿಕೆಗೆ ಅಗತ್ಯವಿರುವ ಸೀಡ್ ವೈರಸ್ ಪ್ರಯೋಗಾಲಯದಿಂದ ಹೊರಗೆ ಸೋರಿಕೆಯಾಗಬಹುದು ಎಂಬ ಕಳವಳಗಳಿಂದಾಗಿ ದೇಶದಲ್ಲಿ ಚುಚ್ಚುಮದ್ದಿನ ಮೂಲಕ ನೀಡುವ ಲಸಿಕೆ (ಐಪಿವಿ)ಯ ತಯಾರಿಕೆಗೆ ಉತ್ತೇಜನ ದೊರಕಿರಲಿಲ್ಲ. ಕೊನೆಗೂ 2006ರಲ್ಲಿ ಭಾರತದಲ್ಲಿ ಐಪಿವಿ ತಯಾರಿಕೆಗೆ ಪರವಾನಿಗೆ ಲಭಿಸಿತ್ತು.
 
ವರ್ಷಗಳು ಕಳೆದಂತೆ ವಿವಿಧ ಕಾರಣಗಳಿಂದಾಗಿ ಒಪಿವಿಯ ಪರಿಣಾಮಕಾರತ್ವ ಕಡಿಮೆಯಾಗಿತ್ತು. ಎರಡು ಲಸಿಕೆಗಳ ಸಂಯೋಜನೆಯ ಬಳಕೆ,ಸಂಘಟಿತ ಸುಸ್ಥಿರ ಅಭಿಯಾನಗಳಿಂದಾಗಿ ಕೊನೆಗೂ 2011ರಲ್ಲಿ ಪೋಲಿಯೋ ದೇಶದಿಂದ ನಿರ್ಮೂಲನಗೊಂಡಿದೆ. 

ಮಿಷನ್ ಇಂದ್ರಧನುಷ್
 
2014ರಿಂದ ಮಿಷನ್ ಇಂದ್ರಧನುಷ್ ನ ಅಡಿ ಲಸಿಕೀಕರಣಕ್ಕೊಳಪಟ್ಟ ಮಕ್ಕಳ ಸಂಖ್ಯೆ ಶೇ.60ರಿಂದ 90ಕ್ಕೇರಿದೆ ಎಂದು ಮೋದಿ ತನ್ನ ಭಾಷಣದಲ್ಲಿ ಹೇಳಿದ್ದರು. ಇತ್ತೀಚಿನ ರಾಷ್ಟ್ರೀಯ ಕುಟುಂಬ ಸ್ವಾಸ್ಥ್ಯ ಸಮೀಕ್ಷೆಯು ಕೇವಲ 17 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ಮಾಹಿತಿಗಳನ್ನು ಒದಗಿಸಿದ್ದು, ಮೋದಿ ಹೇಳಿರುವಂತೆ ಶೇ.90ರಷ್ಟು ಲಸಿಕೀಕರಣವನ್ನು ಯಾವುದೇ ರಾಜ್ಯವು ಸಾಧಿಸಿಲ್ಲ. 

ಆರೋಗ್ಯ ಸಚಿವಾಲಯವು 2020 ಡಿಸೆಂಬರ್ನಲ್ಲಿ ದತ್ತಾಂಶಗಳನ್ನು ಬಿಡುಗಡೆಗೊಳಿಸಿದ್ದು, ಉಳಿದ ರಾಜ್ಯಗಳ ದತ್ತಾಂಶಗಳನ್ನು ಶೀಘ್ರವೇ ಒದಗಿಸುವ ನಿರೀಕ್ಷೆಯಿದೆ. ಹಿಮಾಚಲ ಪ್ರದೇಶ, ಪ.ಬಂಗಾಳ, ಕರ್ನಾಟಕ, ಗೋವಾ ಮತ್ತು ಸಿಕ್ಕಿಂ ಈ ಐದು ರಾಜ್ಯಗಳು ಮಾತ್ರ ಶೆ.80ರಷ್ಟು ಲಸಿಕೀಕರಣವನ್ನು ಸಾಧಿಸಿದ್ದು, ಹಿಮಾಚಲ ಪ್ರದೇಶ ಮಾತ್ರ ಶೆ.89ನ್ನು ತಲುಪಿದೆ.

ಮಕ್ಕಳಿಗೆ ಬಿಸಿಜಿಯ ಒಂದು ಡೋಸ್, ಡಿಪಿಟಿಯ ಮೂರು ಡೋಸ್, ಪೋಲಿಯೊ ಲಸಿಕೆಯ ಮೂರು ಡೋಸ್ ಮತ್ತು ದಡಾರ ಲಸಿಕೆಯ ಒಂದು ಡೋಸ್ ಅನ್ನು ನೀಡುವುದು ಮಿಷನ್ ಇಂದ್ರಧನುಷ್ ನ ಗುರಿಯಾಗಿದೆ.

1897ರಲ್ಲಿ ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ವಾಲ್ದಿಮಿರ್ ಹಾಫ್ಕಿನ್ ಅವರು ಪ್ಲೇಗ್ ರೋಗದ ವಿರುದ್ಧ ಲಸಿಕೆಯನ್ನು ಕಂಡು ಹಿಡಿದಿದ್ದರು. ಮೊಟ್ಟಮೊದಲು ಲಸಿಕೆಯನ್ನು ತನ್ನ ಮೇಲೆಯೇ ಪ್ರಯೋಗಿಸಿಕೊಂಡಿದ್ದ ಅವರು ನಂತದ ಬೈಕಳಾ ಜೈಲಿನಲ್ಲಿಯ ಕೈದಿಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಿದ್ದರು. 1899ರಲ್ಲಿ ಪ್ಲೇಗ್ ಪ್ರಯೋಗಾಲಯ ಸ್ಥಾಪನೆಯಾಗಿತ್ತು ಮತ್ತು 1925ರಲ್ಲಿ ಹಾಫ್ಕಿನ್ ಇನ್ ಸ್ಟಿಟ್ಯೂಟ್ ಎಂದು ಮರುನಾಮಕರಣಗೊಂಡಿತ್ತು.

ದೇಶದ ವಿವಿಧ ಪ್ರಾಂತಗಳಲ್ಲಿ ಹಲವಾರು ಲಸಿಕೆ ತಯಾರಿಕೆ ಸಂಸ್ಥೆಗಳು ಸ್ಥಾಪನೆಗೊಂಡಿದ್ದವು ಮತ್ತು 1940ಕ್ಕಿಂತ ಮುಂಚೆ ಭಾರತದಲ್ಲಿ ಡಿಫ್ತೀರಿಯಾ, ಪೆರ್ಟುಸಿಸ್ ಮತ್ತು ಟೆಟಾನಸ್ ಗಳಿಗೆ ಲಸಿಕೆ ತಯಾರಿಕೆಯನ್ನು ಸಾಧ್ಯಗೊಳಿಸಿದ್ದವು.
ಭಾರತೀಯ ಲಸಿಕೆಗಳ ಸಿಂಹಪಾಲನ್ನು ತಯಾರಿಸಿದ್ದ ಹಲವಾರು ಸಾರ್ವಜನಿಕ ಕ್ಷೇತ್ರದ ಲಸಿಕೆ ಘಟಕಗಳು ಕಾಲಕ್ರಮೇಣ ಮುಚ್ಚಲ್ಪಟ್ಟವು ಅಥವಾ ಅವುಗಳ ತಯಾರಿಕಾ ಸಾಮರ್ಥ್ಯ ಕ್ಷೀಣಿಸಿತ್ತು. ಇದು ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೊಟೆಕ್ ನಂತಹ ಖಾಸಗಿ ಕಂಪನಿಗಳು ತಲೆಯೆತ್ತಲು ಅವಕಾಶವನ್ನು ಕಲ್ಪಿಸಿತ್ತು. ಇಂದು ಈ ಕಂಪನಿಗಳು ಲಸಿಕೆ ತಯಾರಿಕೆಯಲ್ಲಿ ಮೂಂಚೂಣಿಯಲ್ಲಿದ್ದು, ಜಾಗತಿಕ ಪೂರೈಕೆದಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿವೆ.

ಕೃಪೆ: thehindu.com

Writer - ಜಾಕೋಬ್ ಕೋಷಿ

contributor

Editor - ಜಾಕೋಬ್ ಕೋಷಿ

contributor

Similar News