ಮುಕುಲ್ ರಾಯ್ ಮತ್ತೆ ಟಿಎಂಸಿಗೆ ವಾಪಸಾಗಲಿದ್ದಾರೆಯೇ? ಕುತೂಹಲ ಕೆರಳಿಸುತ್ತಿರುವ ಪಶ್ಚಿಮ ಬಂಗಾಳ ರಾಜಕೀಯ

Update: 2021-06-10 07:25 GMT

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಕೆಲ ಸಮಯದ ಹಿಂದೆ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಹಿರಿಯ ನಾಯಕ ಮುಕುಲ್ ರಾಯ್ ಮತ್ತೆ ತೃಣಮೂಲ ಕಾಂಗ್ರೆಸ್‍ಗೆ ಮರಳಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಟಿಎಂಸಿ ಈ ಕುರಿತಂತೆ ಮೌನ ವಹಿಸಿದ್ದರೆ ಮುಕುಲ್ ರಾಯ್ ಕೂಡ ಕೊಲ್ಕತ್ತಾದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಭಾಗವಹಿಸದೆ ತಮ್ಮ ಮುಂದಿನ ನಡೆಯ ಕುರಿತು ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.

ಆದರೆ ಮುಕುಲ್ ರಾಯ್ ಮುಂದಿನ ನಡೆ ಕುರಿತು ಬುಧವಾರ ಸಂಜೆ ಟಿಎಂಸಿ ಸಂಸದ ಸೌಗತ ರಾಯ್ ಒಂದು ಸ್ಪಷ್ಟ ಸುಳಿವು ನೀಡಿದ್ದಾರೆ.

"ಅಭಿಷೇಕ್ ಬ್ಯಾನರ್ಜಿ ಜತೆಗೆ ಹಲವರು ಸಂಪರ್ಕದಲ್ಲಿದ್ದಾರೆ ಹಾಗೂ ಅವರು ವಾಪಸಾಗಲು ಬಯಸಿದ್ದಾರೆ. ಅವರು ಪಕ್ಷಕ್ಕೆ ಅಗತ್ಯವಿರುವ ಸಂದರ್ಭ ಅದಕ್ಕೆ ದ್ರೋಹ ಬಗೆದಿದ್ದಾರೆ ಎಂದು ನನಗನಿಸುತ್ತದೆ. ಆದರೆ ಅಂತಿಮ ನಿರ್ಧಾರವನ್ನು ಮಮತಾ ದೀದಿ ತೆಗೆದುಕೊಳ್ಳುತ್ತಾರೆ. ಹೀಗೆ ಪಕ್ಷಾಂತರಗೈದವರನ್ನು ಮೃದುವಾದಿಗಳು ಹಾಗೂ ಪ್ರಖರವಾದಿಗಳು ಎಂದು ಪ್ರತ್ಯೇಕಿಸಬೇಕಾಗುತ್ತದೆ. ಮೃದುವಾದಿಗಳು ಪಕ್ಷ ತೊರೆದರೂ ಸೀಎಂ ಬಗ್ಗೆ ಅವಮಾನಕರ ಹೇಳಿಕೆ ನೀಡದವರಾಗಿದ್ದರೆ ಪ್ರಖರವಾದಿಗಳು ಸೀಎಂ ಅವರನ್ನು ಸಾರ್ವಜನಿಕವಾಗಿ ನಿಂದಿಸಿದವರು" ಎಂದು ಸೌಗತ ರಾಯ್ ಹೇಳಿದ್ದಾರೆ. 

"ಬಿಜೆಪಿ ಸೇರಿದ ನಂತರ ಸುವೇಂದು ಅಧಿಕಾರಿ ಸಿಎಂ ಅವರನ್ನು ಸಾರ್ವಜನಿಕವಾಗಿ ನಿಂದಿಸಿದ್ದರೆ ಮುಕುಲ್ ರಾಯ್ ಯಾವತ್ತೂ ಬಹಿರಂಗವಾಗಿ ಸಿಎಂ ವಿರುದ್ಧ ಮಾತನಾಡಿರಲಿಲ್ಲ" ಎಂದು ಸೌಗತ ರಾಯ್ ಹೇಳಿದ್ದಾರೆ.

ಮುಕುಲ್ ರಾಯ್ ಅವರ ಪತ್ನಿ  ಚಿಕಿತ್ಸೆಗೆ ದಾಖಲಾಗಿರುವ ಆಸ್ಪತ್ರೆಗೆ ಇತ್ತೀಚೆಗೆ ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಭೇಟಿ ನೀಡಿ ಮುಕುಲ್ ರಾಯ್ ಅವರನ್ನು ಮಾತನಾಡಿಸಿದ ನಂತರ ಅವರು ಮತ್ತೆ ಟಿಎಂಸಿಗೆ ವಾಪಸಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆಳವಣಿಗೆಯ ಮರುದಿನವೇ ಪ್ರಧಾನಿ ಮೋದಿ ಅವರು ಮುಕುಲ್ ರಾಯ್‍ಗೆ ಕರೆ ಮಾಡಿ ಮಾತನಾಡಿದ್ದರೆನ್ನಲಾಗಿದೆ.

ರಾಯ್ ಅವರ ಪತ್ನಿಯ ಆರೋಗ್ಯ ವಿಚಾರಿಸಲು ಪ್ರಧಾನಿ ಕರೆ ಮಾಡಿದ್ದರೆಂದು ಬಿಜೆಪಿ ಮೂಲಗಳು ತಿಳಿಸುತ್ತವೆಯಾದರೂ ವಾಸ್ತವವಾಗಿ ತನ್ನ ತಂಡವನ್ನು ಒಟ್ಟಿಗೆ ಇರಿಸಲು ಬಿಜೆಪಿ ಪಟ್ಟ ಪ್ರಯತ್ನ ಇದೆಂದು ಹೇಳಲಾಗಿದೆ.

ಇತ್ತೀಚೆಗೆ ಸುವೇಂದು ಅಧಿಕಾರಿ ಸಹಿತ ಹಲವು ಬಿಜೆಪಿ ನಾಯಕರನ್ನು ಕೇಂದ್ರ ನಾಯಕತ್ವ ದಿಲ್ಲಿಗೆ ಕರೆಸಿದೆ. ಮಂಗಳವಾರ ಸುವೇಂದು ಅವರು  ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರಲ್ಲದೆ ನಂತರ ಪ್ರಧಾನಿಯ ಜತೆಗೂ ಈ ನಾಯಕರು ಮಾತನಾಡಿದ್ದರು.

ಆದರೆ ಕೊಲ್ಕತ್ತಾದ ಬಿಜೆಪಿ ಸಭೆಯಲ್ಲಿ ಮುಕುಲ್ ರಾಯ್ ಅವರು ಗೈರಾಗಿರುವುದರಿಂದ ಅವರ ಹಾಗೂ ಸುವೇಂದು ಅಧಿಕಾರಿ ನಡುವಿನ ಸಂಬಂಧ ಹಳಸಿದೆ ಎಂದೇ ಬಣ್ಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News