2000ದ ಬಳಿಕ ಮೊದಲ ಬಾರಿಗೆ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಏರಿಕೆ: ವಿಶ್ವಸಂಸ್ಥೆ

Update: 2021-06-10 17:07 GMT
ಸಾಂದರ್ಭಿಕ ಚಿತ್ರ

ವಿಶ್ವಸಂಸ್ಥೆ (ಜಿನೀವ), ಜೂ. 10: ಜಗತ್ತಿನಾದ್ಯಂತ ಬಾಲ ಕಾರ್ಮಿಕರ ಸಂಖ್ಯೆ 16 ಕೋಟಿಗೆ ಏರಿದೆ ಹಾಗೂ ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಸಂಖ್ಯೆಗೆ ಇನ್ನೂ ಹಲವು ಲಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ.

ಬಾಲ ಕಾರ್ಮಿಕರ ಸಂಖ್ಯೆಯು ಎರಡು ದಶಕಗಳ ಅವಧಿಯಲ್ಲಿ ಇಷ್ಟೊಂದು ಏರಿಕೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 84 ಲಕ್ಷ ಮಕ್ಕಳು ಬಾಲ ಕಾರ್ಮಿಕರಾಗಿ ಮಾರ್ಪಟ್ಟಿದ್ದಾರೆ ಹಾಗೂ ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ 2022ರ ಕೊನೆಯ ವೇಳೆಗೆ ಇನ್ನೂ 90 ಲಕ್ಷ ಮಕ್ಕಳು ಇದೇ ಹಾದಿಯಲ್ಲಿ ಸಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಮತ್ತು ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ)ಗಳ ವರದಿಯೊಂದು ತಿಳಿಸಿದೆ.

ಆದರೆ, ಅತ್ಯಂತ ಅಗತ್ಯವಾಗಿರುವ ಸಾಮಾಜಿಕ ರಕ್ಷಣಾ ಯೋಜನೆಯ ಪ್ರಯೋಜನವು ಬಡ ಮಕ್ಕಳಿಗೆ ಸಿಗದಿದ್ದರೆ ಬಾಲ ಕಾರ್ಮಿಕರಾಗಿ ಮಾರ್ಪಡುವ ಸಾಧ್ಯತೆಯನ್ನು ಎದುರಿಸುತ್ತಿರುವ ಮಕ್ಕಳ ಸಂಖ್ಯೆ 4.6 ಕೋಟಿಗೆ ಏರಬಹುದು ಎಂಬುದಾಗಿ ಐಎಲ್ಒ ಅಂದಾಜಿಸಿದೆ.

‘‘ಬಾಲ ಕಾರ್ಮಿಕರಿಗೆ ಸಂಬಂಧಿಸಿದ ಹೊಸ ಸಂಖ್ಯೆಗಳು ಎಚ್ಚರಿಕೆಯ ಕರೆಗಂಟೆಯಾಗಿದೆ. ಹೊಸ ತಲೆಮಾರಿನ ಮಕ್ಕಳು ಅಪಾಯಕ್ಕೆ ಗುರಿಯಾಗುವುದನ್ನು ನಾವು ನೋಡುತ್ತಾ ನಿಂತುಕೊಳ್ಳುವುದು ಸಾಧ್ಯವಿಲ್ಲ’’ ಎಂದು ಐಎಲ್ಒ ಮಹಾನಿರ್ದೇಶಕ ಗಯ್ ರೈಡರ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

2000-16ರ ಅವಧಿಯಲ್ಲಿ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ 94 ಕೋಟಿ ಕುಸಿತ
ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲಗೊಳಿಸುವಲ್ಲಿ ಸರಕಾರಗಳು ಮತ್ತು ಅಂತರ್ರಾಷ್ಟ್ರೀಯ ಸಂಘಟನೆಗಳು ಗಮನಾರ್ಹ ಪ್ರಯತ್ನಗಳನ್ನು ಮಾಡಿದ್ದವು. 2000 ಮತ್ತು 2016ರ ನಡುವಿನ ಅವಧಿಯಲ್ಲಿ ಬಾಲ ಕಾರ್ಮಿಕರ ಸಂಖ್ಯೆಯು 9.4 ಕೋಟಿಯಷ್ಟು ಕುಸಿಯಿತು ಎಂದು ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಂಕಿಅಂಶಗಳು ಹೇಳುತ್ತವೆ. ಆದರೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಪ್ರವೃತ್ತಿಯು ತಿರುವು ಮುರುವಾಗಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News