ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ರೈತ ಮುಖಂಡ ರಾಕೇಶ್ ಟಿಕಾಯತ್

Update: 2021-06-10 18:03 GMT
 ಫೋಟೊ ಕೃಪೆ: ANI 

ಲಕ್ನೋ, ಜೂ.10: ದೇಶದಲ್ಲಿ ವಿಪಕ್ಷಗಳು ದುರ್ಬಲವಾಗಿವೆ. ಒಂದು ವೇಳೆ ದೇಶದಲ್ಲಿ ಬಲಿಷ್ಟ ವಿಪಕ್ಷಗಳು ಇದ್ದರೆ ರೈತರು ರಸ್ತೆಯಲ್ಲಿ ಕೂರುವ ಅಗತ್ಯವಿರಲಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಬುಧವಾರ ಕೋಲ್ಕತಾಕ್ಕೆ ತೆರಳಿ ಮುಖ್ಯಮಂತ್ರಿಯನ್ನು ಭೇಟಿಯಾದ ಸಂದರ್ಭ ಇದೇ ಮಾತನ್ನು ಅವರಲ್ಲೂ ಹೇಳಿದ್ದೇನೆ. ವಿಪಕ್ಷಗಳು ಬಲಿಷ್ಟವಾಗಬೇಕಿದೆ ಎಂದು ಉತ್ತರಪ್ರದೇಶದ ಗಾಝಿಯಾಬಾದ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಟಿಕಾಯತ್ ಹೇಳಿದರು.

ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಲು ಕೇಂದ್ರದಿಂದ ಅನುಮತಿ ಪಡೆದಿದ್ದೀರಾ ಎಂಬ ಪ್ರಶ್ನೆಗೆ ಟಿಕಾಯತ್ ‘ನಾನು ಅಪಘಾನಿಸ್ತಾನದ ಅಧ್ಯಕ್ಷರನ್ನು ಭೇಟಿಯಾಗುವುದಾದರೆ ಕೇಂದ್ರದ ಅನುಮತಿ ಬೇಕು. ಆದರೆ ಮುಖ್ಯಮಂತ್ರಿಯನ್ನು ಭೇಟಿಯಾಗಬೇಕಿದ್ದರೆ ವೀಸಾದ ಅಗತ್ಯವಿದೆಯೇ? ನಾನು ಭೇಟಿಯಾದದ್ದು ಮುಖ್ಯಮಂತ್ರಿಯನ್ನು, ಯಾವುದೇ ಪಕ್ಷದ ಮುಖ್ಯಸ್ಥರನ್ನಲ್ಲ’ ಎಂದುತ್ತರಿಸಿದರು. 

ರಾಜ್ಯದ ಕಾರ್ಯನೀತಿಯ ಕುರಿತು ನಾವು ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದೇವೆ. ದಿಲ್ಲಿಯ ಮುಖ್ಯಮಂತ್ರಿ ಕೇಜ್ರೀವಾಲ್ರನ್ನು ಭೇಟಿಯಾಗಿದ್ದೇವೆ. ಉತ್ತರಾಖಂಡದ ಬಿಜೆಪಿ ಮುಖ್ಯಮಂತ್ರಿ, ಪಂಜಾಬ್‌ನ ಕಾಂಗ್ರೆಸ್ ಮುಖ್ಯಮಂತ್ರಿಯನ್ನೂ ಭೇಟಿಯಾಗಲಿದ್ದೇವೆ ಎಂದು ಟಿಕಾಯತ್ ಹೇಳಿದರು. ಮಮತಾ ಬ್ಯಾನರ್ಜಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಪಶ್ಚಿಮ ಬಂಗಾಳ ಮಾದರಿ ರಾಜ್ಯವಾಗಿ ನಿಂತು ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಟಿಕಾಯತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News