​ಮೇ ತಿಂಗಳ ಮಳೆ 121 ವರ್ಷಗಳಲ್ಲೇ ಎರಡನೇ ಗರಿಷ್ಠ

Update: 2021-06-11 03:54 GMT

ಹೊಸದಿಲ್ಲಿ, ಜೂ.11: ದೇಶದಲ್ಲಿ ಕಳೆದ ತಿಂಗಳು ಬಿದ್ದ ಮಳೆಯ ಪ್ರಮಾಣ 121 ವರ್ಷಗಳಲ್ಲೇ ಎರಡನೇ ಗರಿಷ್ಠ ಪ್ರಮಾಣ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಎರಡು ಚಂಡಮಾರುತಗಳು ಮತ್ತು ಪಶ್ಚಿಮ ಪ್ರಕ್ಷುಬ್ಧತೆ ಈ ಭಾರೀ ಮಳೆಗೆ ಕಾರಣ ಎಂದು ಹೇಳಿದೆ.

ದೇಶದಲ್ಲಿ ಮೇ ತಿಂಗಳಲ್ಲಿ ಸರಾಸರಿ 34.18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಕೂಡಾ 1901ರ ಬಳಿಕ ದೇಶದಲ್ಲಿ ಮೇ ತಿಂಗಳಲ್ಲಿ ದಾಖಲಾದ ನಾಲ್ಕನೇ ಕನಿಷ್ಠ ಉಷ್ಣಾಂಶವಾಗಿದೆ. 1917ರ ಮೇ ತಿಂಗಳಲ್ಲಿ ಅತ್ಯಂತ ಕನಿಷ್ಠ ಅಂದರೆ 32.68 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ದೇಶದಲ್ಲಿ 1977ರ ಬಳಿಕ ಮೇ ತಿಂಗಳಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನವೆಂದರೆ 33.84 ಡಿಗ್ರಿ ಸೆಲ್ಸಿಯಸ್ ಎಂದು ಹವಾಮಾನ ಇಲಾಖೆ ಅಂಕಿ ಅಂಶ ನೀಡಿದೆ.

ಭಾರತದ ಯಾವುದೇ ಕಡೆಗಳಲ್ಲಿ 2021ರ ಮೇ ತಿಂಗಳಲ್ಲಿ ಉಷ್ಣಗಾಳಿ ಬೀಸಿದ ವರದಿಯಾಗಿಲ್ಲ. ಕಳೆದ ತಿಂಗಳು ದೇಶದಲ್ಲಿ ಸರಾಸರಿ 107.9 ಮಿಲಿಮೀಟರ್ ಮಳೆ ಬಿದ್ದಿದ್ದು, ಇದು ದೀರ್ಘಾವಧಿ ಸರಾಸರಿಯಾದ 62 ಮಿಲಿಮೀಟರ್‌ಗೆ ಹೋಲಿಸಿದರೆ ಶೇಕಡ 74ರಷ್ಟು ಅಧಿಕ. "ಮೇ ತಿಂಗಳಲ್ಲಿ ಬಿದ್ದಿರುವ ಮಳೆ 1901ರ ಬಳಿಕ ದಾಖಲಾದ ಎರಡನೇ ಗರಿಷ್ಠ ಪ್ರಮಾಣ. 1990ರಲ್ಲಿ ಇದುವರೆಗಿನ ಗರಿಷ್ಠ (110.7 ಮಿ.ಮೀ) ಮಳೆ ಬಿದ್ದಿತ್ತು ಎಂದು ಮೇ ತಿಂಗಳ ವರದಿಯಲ್ಲಿ ವಿವರಿಸಿದೆ.

ಅರಬ್ಬಿ ಸಮುದ್ರದಲ್ಲಿ ಮತ್ತು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸಿದ್ದು ಇದಕ್ಕೆ ಪ್ರಮುಖ ಕಾರಣ. ತೀವ್ರ ಸ್ವರೂಪದ ಚಂಡಮಾರುತ ತೌಕ್ತೆ ಅರಬ್ಬಿಸಮುದ್ರದಲ್ಲಿ ಎದ್ದಿದ್ದು, ಮೇ 17ರಂದು ಗುಜರಾತ್ ಕರಾವಳಿ ಮೇಲೆ ಅಪ್ಪಳಿಸಿದೆ. ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳಲ್ಲಿ ತನ್ನ ಪ್ರಭಾವ ತೋರಿಸಿತ್ತು. ಇದಾದ ಬಳಿಕ ಮೇ 26ರಂದು ಬಂಗಾಳ ಕೊಲ್ಲಿಯಲ್ಲಿ ಇಂಥದ್ದೇ ಚಂಡಮಾರುತ ಎದ್ದಿದ್ದು, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಮಳೆಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News