ತಮಿಳುನಾಡಿನಲ್ಲಿ ಅತ್ಯಾಚಾರ ಆರೋಪಿಯನ್ನು ವಿವಾಹವಾಗಲು ಸಂತ್ರಸ್ತೆಗೆ ಒತ್ತಾಯಿಸಿದ ಪೊಲೀಸರು: ಆರೋಪ

Update: 2021-06-11 07:16 GMT

ಚೆನ್ನೈ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ 28 ವರ್ಷದ ಭಿನ್ನಚೇತನ ಯುವತಿಗೆ ಆಕೆಯ ಮೇಲೆ ಅತ್ಯಾಚಾರವೆಸಗಿದ ಯುವಕನನ್ನು ಮದುವೆಯಾಗಲು ಪೊಲೀಸರು ಬಲವಂತಪಡಿಸಿದ್ದಾರೆಂದು ಸ್ಥಳೀಯರು ದೂರಿದ ನಂತರ ರಾಜ್ಯದ ಭಿನ್ನಚೇತನರ ಕಲ್ಯಾಣ ಕಮಿಷನರೇಟ್  ವರದಿಯನ್ನು ಕೇಳಿದೆ. ಘಟನೆ ಯಾವಾಗ ನಡೆದಿದೆಯೆಂದು ತಿಳಿದು ಬಂದಿಲ್ಲ.

ಯುವತಿಗೆ ದೃಷ್ಟಿ ಮಾಂದ್ಯವಿದೆ ಹಾಗೂ ಆಕೆ ಮಾನಸಿಕ ಅಸ್ವಸ್ಥೆಯೆಂದು ಹೇಳಲಾಗಿದ್ದು ಆಕೆ ಐದು ತಿಂಗಳ ಗರ್ಭಿಣಿಯೆಂದೂ  ತಿಳಿದು ಬಂದಿದೆ. ಆರೋಪಿಯನ್ನು 35 ವರ್ಷದ ಶ್ರೀಪಾಲ್ ಎಂದು ಗುರುತಿಸಲಾಗಿದೆ.

ಈ ಘಟನೆ ಕುರಿತು ತಮಿಳುನಾಡು  ಭಿನ್ನ ಸಾಮರ್ಥ್ಯದವರ ಮತ್ತು ಸಹಾಯಕರ ಸಂಘವು ಸಿಂಗಾರಪೆಟ್ಟೈ ಠಾಣೆಗೆ ಜೂನ್ 3ರಂದು ದೂರು ದಾಖಲಿಸಿದಾಗ ದೂರು ಸ್ವೀಕೃತಿ ರಶೀದಿ ಪೊಲೀಸರು ನೀಡಿಲ್ಲ ಎಂದು ಸಂಘ ಆರೋಪಿಸಿದೆ. ಆದರೆ ತನಿಖೆ ನಡೆಸುವ ಭರವಸೆ ನೀಡಿದ್ದ ಪೊಲಿಸರು ತಾವೇ ರಾಜಿಪಂಚಾತಿಕೆ ನಡೆಸಿ ಆರೋಪಿಯನ್ನು ವಿವಾಹವಾಗಲು ಯುವತಿಗೆ ಬಲವಂತಪಡಿಸಿದ್ದಾರೆಂದು ಆರೋಪಿಸಲಾಗಿದೆ.

ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ದೂರನ್ನೂ ಜೂನ್ 5ರ ತನಕ ಪೊಲೀಸರು ದಾಖಲಿಸಿರಲಿಲ್ಲ, ಬಲವಂತದಿಂದ ಆಕೆಯ ವಿವಾಹ ನಡೆಸಲಾಗಿರುವುದು ಬುಧವಾರ ತಿಳಿದು ಬಂತು ಎಂದು ಸಂಸ್ಥೆ ಹೇಳಿದೆ.

ಆದರೆ ಗ್ರಾಮದ ಮುಖ್ಯಸ್ಥರೇ ಮುಂದೆ ನಿಂತು ಮದುವೆ ಮಾಡಿದ್ದಾರೆಂದೂ ಸಂಸ್ಥೆಯ ಕಾರ್ಯದರ್ಶಿ ನಂಬುರಾಜನ್ ಹೇಳಿದ್ದಾರೆ.

ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ  ಭಿನ್ನ ಚೇತನರ ಕಲ್ಯಾಣ ಆಯುಕ್ತ ಜಾನಿ ಟಾಮ್ ವರ್ಗೀಸ್ ಜೂನ್ 8ರಂದು  ಪೊಲೀಸರಿಗೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ನೋಟಿಸ್ ಜಾರಿಗೊಳಿಸಿದ್ದಾರೆ ಹಾಗೂ ಜೂನ್ 22ರೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದ್ದಾರೆ.

ಪೊಲೀಸರು ತಮ್ಮ ವಿರುದ್ಧದ ಆರೋಪ ನಿರಾಕರಿಸಿದ್ದಾರೆ. ಆರೋಪಿಗೆ ಈ ಮೊದಲೇ ಮದುವೆಯಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News