"ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಿ"

Update: 2021-06-11 09:50 GMT

ಹೊಸದಿಲ್ಲಿ: ಭಾರತದಲ್ಲಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಮಾನವ ಹಕ್ಕು ಹೋರಾಟಗಾರರು ಹಾಗೂ  ಹಲವು ಮಾನವ ಹಕ್ಕು ಪ್ರತಿಪಾದಕರ ತಕ್ಷಣ ಬಿಡುಗಡೆ ಕೋರಿ ಸುಮಾರು 57 ಮಂದಿ ಅಂತರಾಷ್ಟ್ರೀಯ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಮನವಿ ಮಾಡಿದ್ದಾರೆ. ಈ ಪತ್ರಕ್ಕೆ ಸಹಿ ಹಾಕಿದವರಲ್ಲಿ ಖ್ಯಾತ ನೋಬೆಲ್ ಪ್ರಶಸ್ತಿ ವಿಜೇತರು, ಶೈಕ್ಷಣಿಕ ತಜ್ಞರು, ಮಾನವ ಹಕ್ಕು ಹೋರಾಟಗಾರರು, ವಕೀಲರು ಹಾಗೂ ಯುರೋಪಿಯನ್ ದೇಶಗಳ ಸಂಸದರು ಸೇರಿದ್ದಾರೆ.

ನೋಬೆಲ್ ಪ್ರಶಸ್ತಿ ವಿಜೇತರಾಗಿರುವ ಪೋಲಂಡ್ ದೇಶದ ಸಾಹಿತಿ ಓಲ್ಗಾ ತೊಕರ್ಝುಕ್, ನೈಜೀರಿಯಾದ ಸಾಹಿತಿ ವೋಲೆ ಸೋಯಿಂಕ, ವಿಶ್ವ ಸಂಸ್ಥೆಯ ವರ್ಕಿಂಗ್ ಗ್ರೂಪ್ ಆನ್ ಆರ್ಬಿಟ್ರರಿ ಡಿಟೆನ್ಶನ್ ಇದರ ಮಾಜಿ ಅಧ್ಯಕ್ಷ ಜೋಸ್ ಅಂಟೋನಿಯೊ ಗುವೆರ-ಬರ್ಮುಡೆಝ್ ಹಾಗೂ ಕ್ಯಾಂಟರ್‍ಬರಿಯ ಮಾಜಿ ಆರ್ಚ್ ಬಿಷಪ್ ರೋವನ್ ವಿಲಿಯಮ್ಸ್ ಪತ್ರಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.

ಸದ್ಯದ ಕೋವಿಡ್ ತುರ್ತುಪರಿಸ್ಥಿತಿಯಲ್ಲಿ  ಭಾರತದ ಕಾರಾಗೃಹಗಳಲ್ಲೂ ಕೋವಿಡ್ ಹರಡುವ ಸಾಧ್ಯತೆಯಿರುವುದರಿಂದ ಅನುಕಂಪದ ಆಧಾರದಲ್ಲಿ ಹಾಗೂ ಜವಾಬ್ದಾರಿಯುತ ಕ್ರಮವಾಗಿ ಈ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಶೈಕ್ಷಣಿಕ ತಜ್ಞರು, ವೃತ್ತಿಪರರು, ವಕೀಲರು ಹಾಗೂ ಜರ್ಮನಿ, ಸ್ಪೇನ್, ಇಂಗ್ಲೆಂಡ್ ಐರ್ಲ್ಯಾಂಡ್ ಮತ್ತಿತರ ದೇಶಗಳ ಸಂಸತ್ ಸದಸ್ಯರನ್ನೊಳಗೊಂಡ ಇಂಟರ್ ನ್ಯಾಷನಲ್ ಸಾಲಿಡಾರಿಟಿ ಫಾರ್ ಎಕ್ಯಾಡೆಮಿಕ್ ಫ್ರೀಡಂ ಇನ್ ಇಂಡಿಯಾದ ಪ್ರಯತ್ನದ ಫಲವಾಗಿ ಮೇಲಿನ ಅಪೀಲನ್ನು ಮಾಡಲಾಗಿದೆ.

"ರಾಜಕೀಯ ಅಪರಾಧಗಳಿಗೆ ಭಾರತದಲ್ಲಿ ಬಂಧಿತರಾಗಿರುವ ಸಾವಿರಾರು ಮಂದಿಯಲ್ಲಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ 16 ಮಂದಿಯಲ್ಲಿ ನಾಲ್ಕು ಶೈಕ್ಷಣಿಕ ತಜ್ಞರು, ಮೂವರು ವಕೀಲರು, ಇಬ್ಬರು ಸ್ವತಂತ್ರ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಒಬ್ಬ ಕವಿ, ಮೂವರು ಕಲಾವಿದರು ಹಾಗೂ ಒಬ್ಬ ಜೇಸೂಟ್ ಪಾದ್ರಿ ಇದ್ದಾರೆ, ಅವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು ಹಾಗೂ ಹಲವರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ" ಎಂದು ಪತ್ರದಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News