ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ: ಗುಜರಾತ್ ನಲ್ಲಿ ಕಾಂಗ್ರೆಸ್ ಮುಖಂಡರ ಬಂಧನ

Update: 2021-06-11 17:58 GMT

ಅಹ್ಮದಾಬಾದ್, ಜೂ.11: ತೈಲ ಬೆಲೆಏರಿಕೆಯನ್ನು ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದ 100ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಗುಜರಾತ್ ನ ವಿವಿಧೆಡೆ ಬಂಧಿಸಲಾಗಿದೆ. ಇವರು ಪೊಲೀಸರ ಅನುಮತಿ ಪಡೆಯದೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ತೈಲ ಬೆಲೆ ಗಗನಕ್ಕೇರಿರುವುದನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಹೈಕಮಾಂಡ್ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗುಜರಾತ್ನ ಅಹ್ಮದಾಬಾದ್, ಗಾಂಧೀನಗರ, ರಾಜ್ಕೋಟ್, ಪಾಲನಪುರ ಮತ್ತು ವಡೋದರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಗಾಂಧೀನಗರದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಅಮಿತ್ ಚಾವ್ಡ, ವಡೋದರದಲ್ಲಿ ಮಾಜಿ ರಾಜ್ಯಾಧ್ಯಕ್ಷ ಭರತಸಿನ್ಹ ಸೋಳಂಕಿ, ಅಹ್ಮದಾಬಾದ್ನಲ್ಲಿ ಹಿರಿಯ ಮುಖಂಡ, ಶಾಸಕ ಶೈಲೇಶ್ ಪರ್ಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಂದಿನಿಂದ ತೈಲ ಬೆಲೆ ಏರುತ್ತಲೇ ಇದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು ಹಾಗೂ ಕಾರುಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ತೈಲ ಬೆಲೆಯೇರಿಕೆಯನ್ನು ಖಂಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News