ರೈತರನ್ನು ಹೇಗಾದರೂ ಹಿಂಸಾಚಾರಕ್ಕೆ ಪ್ರಚೋದಿಸಬೇಕೆಂದು ಕೇಂದ್ರ ಸರಕಾರ ಬಯಸುತ್ತಿದೆ: ಟಿಕಾಯತ್‌ ಹೇಳಿಕೆ

Update: 2021-06-12 17:23 GMT
ಫೈಲ್ ಫೋಟೊ

ಹೊಸದಿಲ್ಲಿ, ಜೂ.12: ಸಿಂಘು ಗಡಿಭಾಗದಲ್ಲಿ ಇಬ್ಬರು ಪೊಲೀಸರ ಮೇಲೆ ಹಲ್ಲೆಯಾಗಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ರೈತರು ಹಿಂಸಾಚಾರದಲ್ಲಿ ತೊಡಗಿಲ್ಲ ಎಂದಿದ್ದಾರೆ. ಪೊಲೀಸರು ಬಹುಷಃ ಸಮವಸ್ತ್ರ ಧರಿಸದೆ ಬಂದಿದ್ದರು. ರೈತರ ಪ್ರತಿಭಟನೆಯ ಬಗ್ಗೆ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಒಂದು ವರ್ಗದ ಮಾಧ್ಯಮದ ವರದಿಗಾರರು ಎಂದು ಪ್ರತಿಭಟನಾಕಾರರು ತಪ್ಪು ತಿಳಿದಿರಬಹುದು. ಆದರೆ ರೈತರು ಯಾವತ್ತೂ ಹಿಂಸಾಚಾರದಲ್ಲಿ ನಂಬಿಕೆ ಇರಿಸಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ. 

ರೈತರನ್ನು ಹೇಗಾದರೂ ಮಾಡಿ ಹಿಂಸಾಚಾರಕ್ಕೆ ಪ್ರಚೋದಿಸಬೇಕು ಎಂದು ಕೇಂದ್ರ ಸರಕಾರ ಶತಪ್ರಯತ್ನ ನಡೆಸುತ್ತಿದೆ. ಅಲ್ಲದೆ ಪೊಲೀಸರು ನಿರಂತರವಾಗಿ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡುತ್ತಿದ್ದರೆ ಕೆಲವು ಪ್ರತಿಭಟನಾಕಾರರೊಂದಿಗೆ ನಿಕಟ ಸಂಪರ್ಕ ಸಾಧ್ಯವಾಗಬಹುದು ಎಂಬ ತಂತ್ರ ಹೂಡಲಾಗಿದೆ ಎಂದು ಟಿಕಾಯತ್ ಹೇಳಿದ್ದಾರೆ. ಅವರು ಎಫ್ಐಆರ್ ದಾಖಲಿಸಬಹುದು. ಆದರೆ ಎಫ್ಐಆರ್ನಲ್ಲಿ ಏನನ್ನಾದರೂ ದಾಖಲಿಸಬೇಕಲ್ಲವೇ, ಇದೇ ಎದುರಾಗಿರುವ ಸಮಸ್ಯೆ ಎಂದು ವ್ಯಂಗ್ಯವಾಡಿದರು.

ಜೂನ್ 10ರಂದು ದಿಲ್ಲಿಯ ಸಿಂಘು ಗಡಿಭಾಗದಲ್ಲಿ ಇಬ್ಬರು ಸ್ಪೆಷಲ್ ಬ್ರಾಂಚ್ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ ಎಂದು ದಿಲ್ಲಿ ಪೊಲೀಸರು ಶನಿವಾರ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿಂಘು ಗಡಿಭಾಗದಲ್ಲಿ ಪ್ರತಿಭಟನಾಕಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಪರಾಮರ್ಶೆಗೆ ಈ ಅಧಿಕಾರಿಗಳು ಅಲ್ಲಿಗೆ ತೆರಳಿ, ಪ್ರತಿಭಟನಾ ಸ್ಥಳದ ಫೋಟೋ ತೆಗೆಯುತ್ತಿದ್ದಾಗ ಅವರನ್ನು ಥಳಿಸಲಾಗಿದೆ ಎಂದು ನರೇಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ‌

ನಾವು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಓರ್ವ ಮಹಿಳೆ ಬಂದು ನಮ್ಮನ್ನು ಪ್ರಶ್ನಿಸಿದಳು. ಅಷ್ಟರಲ್ಲಿ ಇತರರೂ ಬಂದು ನಮ್ಮನ್ನು ಸುತ್ತುವರಿದರು. ಅವರೆಲ್ಲಾ ಮದ್ಯ ಸೇವಿಸಿದ್ದರು ಮತ್ತು ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಗಾಯಗೊಂಡ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News