ಪುರಾತನ ಗರೀಬ್ ನವಾಝ್ ಮಸೀದಿ ನೆಲಸಮಗೊಳಿಸಿದ ಕ್ರಮದ ವಿರುದ್ಧ ಹೈಕೋರ್ಟ್ ಗೆ ಅರ್ಜಿ

Update: 2021-06-12 18:02 GMT

ಲಕ್ನೋ, ಜೂ.12: ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಶತಮಾನಗಳಷ್ಟು ಪುರಾತನವಾದ ಗರೀಬ್ ನವಾಝ್ ಮಸೀದಿಯನ್ನು ನೆಲಸಮಗೊಳಿಸಿರುವುದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ) ಶನಿವಾರ ಹೇಳಿದೆ.

ಬಾರಾಬಂಕಿಯ ರಾಮ್ ಸನೇಹಿ ಘಾಟ್ನಲ್ಲಿದ್ದ ಮಸೀದಿ ಅಕ್ರಮ ವಸತಿ ಕಟ್ಟಡವಾಗಿದೆ ಎಂದು ಹೇಳಿದ್ದ ಅಧಿಕಾರಿಗಳು ಮೇ 17ರಂದು ಮಸೀದಿಯನ್ನು ಕೆಡವಿದ್ದರು. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಕೂಡಾ ಅರ್ಜಿ ಸಲ್ಲಿಸಿದೆ ಎಂದು ಎಐಎಂಪಿಎಲ್ಬಿಯ ವಕೀಲರು ಹೇಳಿದ್ದಾರೆ. 

ಅದೇ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಮಸೀದಿ ಸಮಿತಿಗೆ ಅವಕಾಶ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು ಮಸೀದಿ ಕೆಡವಿದ ಸ್ಥಳದಲ್ಲಿ ಮತ್ತು ವಕ್ಫ್ಬೋರ್ಡ್ಗೆ ಸೇರಿದ ಜಮೀನಿನಲ್ಲಿ ಈಗ ನಿರ್ಮಿಸಲಾಗಿರುವ ‘ಸ್ವತಂತ್ರ ಸಂಗ್ರಾಮ ಸ್ಮಾರಕ ಬಾಲ ಉದ್ಯಾನವನ’ಕ್ಕೆ ಬಳಸದಂತೆ ಮತ್ತು ಈ ಸ್ಥಳದಲ್ಲಿರುವ ಅಕ್ರಮ ನಿರ್ಮಾಣವನ್ನು ತೆಗೆದುಹಾಕುವಂತೆ ಸೂಚಿಸಲು ಅರ್ಜಿಯಲ್ಲಿ ಕೋರಲಾಗಿದೆ ಎಂದವರು ಹೇಳಿದ್ದಾರೆ.

ಮಸೀದಿಯು ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ನಲ್ಲಿ ನೋಂದಣಿಯಾಗಿದೆ ಎಂದು ಎಐಎಂಪಿಎಲ್ಬಿ ಹೇಳಿದೆ. ಮಸೀದಿ ನೆಲಸಮಗೊಳಿಸಿರುವ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಎಐಎಂಪಿಎಲ್ಬಿ ಮತ್ತು ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಒತ್ತಾಯಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News