ಟೆಸ್ಟ್: ಇಂಗ್ಲೆಂಡ್ ವಿರುದ್ಧ ನ್ಯೂಝಿಲ್ಯಾಂಡ್ ಗೆ ಐತಿಹಾಸಿಕ ಸರಣಿ ಜಯ

Update: 2021-06-13 13:00 GMT

ಬರ್ಮಿಂಗ್ ಹ್ಯಾಮ್( ಇಂಗ್ಲೆಂಡ್ ): ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 8 ವಿಕೆಟ್ ಗಳ ಅಂತರದಿಂದ ಮಣಿಸಿರುವ ನ್ಯೂಝಿಲ್ಯಾಂಡ್  ಇನ್ನೂ ಒಂದು ದಿನದ ಆಟ ಬಾಕಿ ಇರುವಾಗಲೇ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.

ನಾಲ್ಕನೇ ದಿನದಾಟವಾದ ರವಿವಾರ ಎಜ್ ಬಾಸ್ಟನ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಗೆಲ್ಲಲು ಕೇವಲ 38 ರನ್ ಗುರಿ ಪಡೆದಿದ್ದ ನ್ಯೂಝಿಲ್ಯಾಂಡ್ 2 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಖಾಯಂ ನಾಯಕ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿದ ಹಂಗಾಮಿ ನಾಯಕ ಟಾಮ್ ಲಥಾಮ್ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದರು. ಔಟಾಗದೆ 23 ರನ್ ಗಳಿಸಿದರು.

ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದ್ದ ಹಿನ್ನೆಲೆಯಲ್ಲಿ ನ್ಯೂಝಿಲ್ಯಾಂಡ್ ದೀರ್ಘ ಸಮಯದ ಬಳಿಕ ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಜಯಿಸಿದೆ.  ಇಂಗ್ಲೆಂಡ್ ವಿರುದ್ದ ಆಡಿರುವ 18 ಟೆಸ್ಟ್ ಸರಣಿಯಲ್ಲಿ ಕೇವಲ ಮೂರನೇ ಬಾರಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ.ಈ ಹಿಂದೆ 1986 ಹಾಗೂ 1999ರಲ್ಲಿ ಗೆಲುವು ದಾಖಲಿಸಿತ್ತು.

ಇಂಗ್ಲೆಂಡ್ ತಂಡ 2014ರಲ್ಲಿ ಶ್ರೀಲಂಕಾ ವಿರುದ್ಧ ಸೋತ ಬಳಿಕ ಮೊದಲ ಬಾರಿ ಸ್ವದೇಶದಲ್ಲಿ ಸರಣಿ ಕಳೆದುಕೊಂಡಿದೆ.

4ನೇ ದಿನದಾಟವಾದ ರವಿವಾರ ಎರಡನೇ ಇನಿಂಗ್ಸ್ ನಲ್ಲಿ  9 ವಿಕೆಟ್ ನಷ್ಟಕ್ಕೆ 122 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ್ದ ಇಂಗ್ಲೆಂಡ್ ಕೇವಲ 37 ರನ್ ಮುನ್ನಡೆ ಪಡೆದಿತ್ತು.  ಇನಿಂಗ್ಸ್ ಆರಂಭಿಸಿದ ತಕ್ಷಣ ಸ್ಟೋನ್ ನಿನ್ನೆಯ ಸ್ಕೋರ್ ಗೆ (15) ಒಂದೂ ರನ್ ಸೇರಿಸದೇ ವಿಕೆಟ್ ಒಪ್ಪಿಸಿದರು. ಆ್ಯಂಡರ್ಸನ್ ದಾಖಲೆ 162ನೇ ಬಾರಿ  ಔಟಾಗದೆ 0 ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News