ಭಾರತಕ್ಕೆ ಪುನರುಜ್ಜೀವನಗೊಂಡ ಕಾಂಗ್ರೆಸ್ ನ ಅಗತ್ಯವಿದೆ: ಕಪಿಲ್ ಸಿಬಲ್

Update: 2021-06-13 13:40 GMT

ಹೊಸದಿಲ್ಲಿ,ಜೂ.13: ಪ್ರತಿಪಕ್ಷ ಪಂಕ್ತಿಗಳಲ್ಲಿಯ ರಾಜಕೀಯ ಶೂನ್ಯವನ್ನು ತುಂಬಲು ಪುನರುಜ್ಜೀವಿತ ಕಾಂಗ್ರೆಸ್ ಇಂದು ಭಾರತಕ್ಕೆ ಅಗತ್ಯವಾಗಿದೆ ಮತ್ತು ಇದೇ ವೇಳೆ ತಾನು ಸಕ್ರಿಯನಾಗಿದ್ದೇನೆ ಮತ್ತು ಅರ್ಥಪೂರ್ಣವಾಗಿ ತೊಡಗಿಕೊಳ್ಳಲು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಪಕ್ಷವೂ ಜನತೆಗೆ ತೋರಿಸಬೇಕಾದ ಅಗತ್ಯವಿದೆ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಪಕ್ಷದ ಉನ್ನತ ನಾಯಕತ್ವಕ್ಕೆ ಚುರುಕು ಮುಟ್ಟಿಸಿದ್ದಾರೆ.


ಕೆಲ ಸಮಯದ ಹಿಂದೆ ಸಂಘಟನಾತ್ಮಕ ಪುನಃಶ್ಚೇತನಕ್ಕೆ ಆಗ್ರಹಿಸಿ ಪಕ್ಷದ ಉನ್ನತ ನಾಯಕತ್ವಕ್ಕೆ ಪತ್ರವನ್ನು ಬರೆದಿದ್ದ 23 ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಸಿಬಲ್ ರವಿವಾರ ಇಲ್ಲಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಕಾಂಗ್ರೆಸ್ ಜನರಿಂದ ದೂರವಾಗಿದೆ ಎಂದು ಮತ್ತೆ ಒತ್ತಿ ಹೇಳಿದರು.

ತಾನು ಜಡತ್ವ ಸ್ಥಿತಿಯಲ್ಲಿಲ್ಲ ಎಂದು ತೋರಿಸಲು ಕಾಂಗ್ರೆಸ್ ಶೀಘ್ರವೇ ಸಂಘಟನಾತ್ಮಕ ಚುನಾವಣೆಗಳನ್ನು ನಡೆಸಬೇಕಾದ, ಕೇಂದ್ರ ಮತ್ತು ರಾಜ್ಯಮಟ್ಟಗಳಲ್ಲಿ ವ್ಯಾಪಕ ಸುಧಾರಣೆಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದ ಅವರು ,‌ ರಾಜಕೀಯ ಪರ್ಯಾಯವು ಶೂನ್ಯವಾಗಿದೆ ಮತ್ತು ದೇಶಕ್ಕೆ ಪ್ರಬಲ, ವಿಶ್ವಾಸಾರ್ಹ ಪ್ರತಿಪಕ್ಷದ ಅಗತ್ಯವಿದೆ. ಕಾಂಗ್ರೆಸ್ ನಲ್ಲಿ ಅನುಭವ ಮತ್ತು ಯುವಜನರ ನಡುವೆ ಸಮತೋಲನವನ್ನು ಸಾಧಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ತನ್ನ ರಾಜಸ್ಥಾನ ಮತ್ತು ಪಂಜಾಬ್ ರಾಜ್ಯ ಘಟಕಗಳಲ್ಲಿ ಆಂತರಿಕ ಅಸಮಾಧಾನವನ್ನು ಎದುರಿಸುತ್ತಿದೆ ಎಂಬ ವರದಿಗಳ ನಡುವೆಯೇ ಸಿಬಲ್ರ ಈ ಹೇಳಿಕೆಯು ಹೊರಬಿದ್ದಿದೆ.

ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರ ಬೆಂಬಲಿಗ ಶಾಸಕರ ದೂರವಾಣಿಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪಗಳ ಸುಳಿಯಲ್ಲಿ ಕಾಂಗ್ರೆಸ್ ನಲುಗುತ್ತಿದ್ದರೆ, ಅತ್ತ ಪಂಜಾಬಿನಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರ ನಡುವೆ ಮುಂದುವರಿದಿರುವ ಕಲಹವು ಪಕ್ಷವನ್ನು ಘಾಸಿಗೊಳಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News