ರಾಜಸ್ತಾನ ಕಾಂಗ್ರೆಸ್ ನಲ್ಲಿ ಮತ್ತೆ ಗರಿಗೆದರಿದ ಭಿನ್ನಮತ

Update: 2021-06-13 15:41 GMT

ಜೈಪುರ, ಜೂ.13: ರಾಜಸ್ತಾನ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ, ಯುವಮುಖಂಡ ಸಚಿನ್ ಪೈಲಟ್ ಬಣಗಳ ನಡುವಿನ ಭಿನ್ನಮತ ಮತ್ತೆ ಗರಿಗೆದರುವುದರೊಂದಿಗೆ ಹೈಕಮಾಂಡ್ ಗೆ ಮತ್ತೊಂದು ಸಮಸ್ಯೆ ಎದುರಾಗಿದೆ. 

ಕಳೆದ ವರ್ಷ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ನೇತೃತ್ವದಲ್ಲಿ ಬಂಡೆದಿದ್ದ ರಾಜಸ್ತಾನ ಕಾಂಗ್ರೆಸ್ ಶಾಸಕರ ಒಂದು ಬಣ ಕಾಂಗ್ರೆಸ್ ನಲ್ಲಿ ಉಳಿಯುವಂತೆ ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿತ್ತು. ಆದರೆ ಆಗ ಆದ ಒಪ್ಪಂದದಂತೆ ತನ್ನ ಬಣದ ಶಾಸಕರಿಗೆ ಇನ್ನೂ ಸಚಿವ ಸ್ಥಾನ ದೊರಕಿಲ್ಲ ಎಂದು ಸಚಿನ್ ಪೈಲಟ್ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ಇದೇ ಕಾರಣಕ್ಕೆ ಅವರು ದಿಲ್ಲಿಗೆ ತೆರಳಿ ಉನ್ನತ ಮುಖಂಡರನ್ನು ಭೇಟಿಯಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು ಇದೀಗ ಪೈಲಟ್ ಬೇಡಿಕೆಯನ್ನು ಈಡೇರಿಸಲು ಸೂತ್ರವೊಂದನ್ನು ರಚಿಸಲಾಗಿದೆ ಎಂದು ಮೂಲಗಳು ಹೇಳಿವೆ. 

ಈಗ ಗೆಹ್ಲೋಟ್ ಸರಕಾರದಲ್ಲಿ 9 ಸಚಿವ ಹುದ್ದೆಗಳು ಖಾಲಿಯಿವೆ. ಪೈಲಟ್ ಬಣದ ಜೊತೆಗೆಯೇ, ಪಕ್ಷವನ್ನು ಬೆಂಬಲಿಸುತ್ತಿರುವ 18 ಪಕ್ಷೇತರ ಶಾಸಕರು ಹಾಗೂ ಬಿಎಸ್ಪಿ ತೊರೆದು ಕಾಂಗ್ರೆಸ್ ಸೇರಿದ ಶಾಸಕರೊಬ್ಬರ ಬಗ್ಗೆಯೂ ಗಮನ ಹರಿಸಬೇಕಿದೆ. ಅಲ್ಲದೆ ಆರು-ಏಳು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಹಿರಿಯರನ್ನೂ ಕಡೆಗಣಿಸುವಂತಿಲ್ಲ. ಇನ್ನೊಂದೆಡೆ ಸಚಿನ್ ಪೈಲಟ್ ಬಣದಲ್ಲಿರುವ ಶಾಸಕರನ್ನು ಸೆಳೆದುಕೊಳ್ಳಲು ಗೆಹ್ಲೋಟ್ ವಿವಿಧ ಒತ್ತಡ ಮತ್ತು ಆಮಿಷ ಒಡ್ಡುತ್ತಿದ್ದಾರೆ ಎಂದು ಆ ಶಾಸಕರೇ ಹೇಳಿರುವುದಾಗಿ ವರದಿಯಾಗಿದೆ. ಹೀಗಾಗಿ ಅತ್ಯಂತ ಜಾಗರೂಕತೆಯ ಹೆ್ಜೆಯಿಡಲು ಹೈಕಮಾಂಡ್ ನಿರ್ಧರಿಸಿದೆ.

ತನ್ನ ಬೆಂಬಲಿಗರಿಗೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಪ್ರಮುಖ ಹುದ್ದೆಗಳನ್ನು ನೀಡಬೇಕು ಎಂಬ ಸಚಿನ್ ಬೇಡಿಕೆಯನ್ನು ಈಡೇರಿಸಲಾಗಿದೆ. ಆದರೆ ಸಚಿನ್ಗೆ ಯಾವ ಸ್ಥಾನಮಾನ ನೀಡಬೇಕು ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಮೂಲಗಳು ಹೇಳಿವೆ. ರಾಜಸ್ತಾನದ ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ತನ್ನ 18 ಬೆಂಬಲಿಗ ಶಾಸಕರೊಂದಿಗೆ ಮುಖ್ಯಮಂತ್ರಿ ಗೆಹ್ಲೋಟ್ ವಿರುದ್ಧ ಬಂಡೆದ್ದಿದ್ದರು. ಬಂಡಾಯ ಶಮನಗೊಳಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದ್ದರೂ ಪೈಲಟ್ ತನ್ನ ಉಪಮುಖ್ಯಮಂತ್ರಿ ಹುದ್ದೆ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷತೆಯನ್ನು ಕಳೆದುಕೊಳ್ಳುವಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News