ಲೋಕ ಜನಶಕ್ತಿ ಪಕ್ಷದ ಐವರು ಬಂಡಾಯ ಸಂಸದರನ್ನು ಅಮಾನತುಗೊಳಿಸಿದ ಚಿರಾಗ್ ಪಾಸ್ವಾನ್
ಹೊಸದಿಲ್ಲಿ: ಚಿರಾಗ್ ಪಾಸ್ವಾನ್ ಅವರು ಐವರು ಬಂಡಾಯ ಸಂಸತ್ ಸದಸ್ಯರನ್ನು ಲೋಕ ಜನಶಕ್ತಿ ಪಕ್ಷದಿಂದ ಅಮಾನತುಗೊಳಿಸಿದ್ದಾರೆ.
ಪಕ್ಷದ ಸಂಸದೀಯ ನಾಯಕರನ್ನಾಗಿ ಅವರ ಚಿಕ್ಕಪ್ಪ ಪಶುಪತಿ ಪರಾಸ್ ರನ್ನು ಆಯ್ಕೆ ಮಾಡಿದ ಮರುದಿನ ಈ ಬೆಳವಣಿಗೆ ನಡೆದಿದೆ. ಐವರು ಸಂಸದರಾದ ಪಶುಪತಿ ಪರಾಸ್, ಪ್ರಿನ್ಸ್ ರಾಜ್, ಚಂದನ್ ಸಿಂಗ್, ವೀಣಾ ದೇವಿ ಹಾಗೂ ಮೆಹಬೂಬ್ ಅಲಿ ಕೇಶರ್ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು India Today ಮಂಗಳವಾರ ವರದಿ ಮಾಡಿದೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ವರ್ಚುವಲ್ ಸಭೆ ನಡೆಯಿತು. ಐವರು ಸಂಸದರಿಗೆ ನೋಟಿಸ್ ನೀಡಲಾಯಿತು. ಆದರೆ ಅವರು ನೋಟಿಸ್ ಗೆ ಉತ್ತರಿಸದ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ.
ಸಂಸದ ಹಾಗೂ ಎಲ್‌ಜೆಪಿ ಮುಖಂಡ ಚಿರಾಗ್ ಪಾಸ್ವಾನ್ ಅವರು ಬುಧವಾರ ಮಧ್ಯಾಹ್ನ 1 ಗಂಟೆಗೆ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಪಕ್ಷದ ಮುಖ್ಯಸ್ಥ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ತೆಗೆದುಹಾಕಲಾಗಿದೆ ಎಂಬ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ. ಸೂರಜ್ ಭನ್ ಅವರನ್ನು ಎಲ್ ಜೆಪಿಯ ಹೊಸ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಐದು ದಿನಗಳಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಸೂರಜ್ ಭನ್ ಅವರಿಗೆ ತಿಳಿಸಲಾಗಿದೆ ಎಂದು ವರದಿಯಾಗಿತ್ತು.
ಈ ನಡುವೆ, ಪಾಸ್ವಾನ್ ಅವರ ಬೆಂಬಲಿಗರು ಪಾಟ್ನಾದ ಎಲ್ ಜೆಪಿ ಕಚೇರಿಗೆ ನುಗ್ಗಿ ಪರಾಸ್ ಹಾಗೂ ಇತರ ಬಂಡಾಯ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿದರು.