ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ವಿವಾದ: ಎರಡು ವಾರದ ಬಳಿಕ ಅರ್ಜಿ ವಿಚಾರಿಸಲಿರುವ ಸುಪ್ರೀಂಕೋರ್ಟ್‌

Update: 2021-06-15 17:32 GMT

ಹೊಸದಿಲ್ಲಿ, ಜೂ.15: ಅಪಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಸ್ಲಿಮೇತರ ನಿರಾಶ್ರಿತರು ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ಗುಜರಾತ್, ರಾಜಸ್ತಾನ್, ಹರ್ಯಾನ ಮತ್ತು ಪಂಜಾಬ್ನಲ್ಲಿ ನೆಲೆಸಿರುವ ಈ ಮೂರು ದೇಶಗಳ ಮುಸ್ಲಿಮೇತರ ನಿರಾಶ್ರಿತರೂ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ಕೇಂದ್ರ ಸರಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಇಂಡಿಯನ್ ಮುಸ್ಲಿಂ ಲೀಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆ 2 ವಾರದ ಬಳಿಕ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ‌

ಈ ಅರ್ಜಿ ಮಂಗಳವಾರ ರಜಾಕಾಲೀನ ನ್ಯಾಯಪೀಠದೆದುರು ವಿಚಾರಣೆಗೆ ಬಂದಿತು. ಕೇಂದ್ರ ಸರಕಾರ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಪ್ರತಿ ಅಫಿದಾವಿತ್ ಸಲ್ಲಿಸಿರುವುದರಿಂದ ಇದನ್ನು ಗಮನಿಸಿ ಉತ್ತರಿಸಲು 2 ವಾರಗಳ ಅವಕಾಶ ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರಿಕೊಂಡರು. ಇದನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್, 2 ವಾರದ ಬಳಿಕ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಆದೇಶಿಸಿತು. ಸೋಮವಾರ ಸುಪ್ರೀಂಕೋರ್ಟ್ಗೆ ಪ್ರತಿ ಅಫಿದಾವಿತ್ ಸಲ್ಲಿಸಿದ್ದ ಕೇಂದ್ರ ಸರಕಾರ ‘ಪೌರತ್ವ ತಿದ್ದುಪಡಿ ಕಾಯ್ದೆಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ತನ್ನ ಅಧಿಕಾರ ಬಳಸಿಕೊಂಡು ನಿರಾಶ್ರಿತರಿಂದ ಪೌರತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 

ಈ ಹಿಂದೆಯೂ 2004, 2006, 2006, 2016 ಮತ್ತು 2018ರಲ್ಲಿ ಈ ಅವಕಾಶ ನೀಡಲಾಗಿದೆ. ಇಲ್ಲಿ ವಿದೇಶಿಯರಿಗೆ ಕಾನೂನಿನಲ್ಲಿ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಕಾನೂನಿನ ಪ್ರಕಾರ ದೇಶ ಪ್ರವೇಶಿಸುವ ವಿದೇಶೀಯರಿಗೆ ಮಾತ್ರ ಈ ಅವಕಾಶ ನೀಡಲಾಗಿದೆ. ಅಲ್ಲದೆ ನಿರಾಶ್ರಿತರಿಗೆ ಪೌರತ್ವ ನೀಡುವ ಕಾರ್ಯ ತ್ವರಿತವಾಗಿ ನಡೆಯಬೇಕೆಂಬ ಉದ್ದೇಶದಿಂದ ಪ್ರತೀ ಪ್ರಕರಣವನ್ನೂ ಪರಿಶೀಲಿಸಿ ನಿರ್ಧರಿಸುವ ಅಧಿಕಾರವನ್ನು ಆಯಾ ರಾಜ್ಯ ಅಥವಾ ಜಿಲ್ಲೆಯ ಆಡಳಿತಕ್ಕೇ ನೀಡಲಾಗಿದೆ’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News