ಸಂಪುಟ ವಿಸ್ತರಣೆಯ ವದಂತಿ ನಡುವೆಯೇ ಸಂಸದರನ್ನು ಭೇಟಿಯಾದ ಅಮಿತ್ ಶಾ

Update: 2021-06-15 17:58 GMT

ಹೊಸದಿಲ್ಲಿ,ಜೂ.15: ಸಂಪುಟ ವಿಸ್ತರಣೆಯ ಕುರಿತು ವದಂತಿಗಳ ನಡುವೆಯೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬಿಜೆಪಿ ಸಂಸದರ ಗುಂಪುಗಳನ್ನು ಭೇಟಿಯಾಗಿದ್ದು ಸರಕಾರದ ಕೆಲಸಗಳು,ಕೋವಿಡ್ ಸ್ಥಿತಿ ಮತ್ತು ಇತರ ವಿಷಯಗಳ ಕುರಿತು ಜಾರಿಯಲ್ಲಿರುವ ಮರುಮಾಹಿತಿ ಸಂಗ್ರಹ ಪ್ರಕ್ರಿಯೆಯ ಭಾಗವಾಗಿತ್ತು ಎಂದು ಪಕ್ಷದಲ್ಲಿನ ಮೂಲಗಳು ತಿಳಿಸಿವೆ. ಕಳೆದ ಐದು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಸಚಿವರೊಂದಿಗೆ ಸಭೆಗಳನ್ನು ನಡೆಸಿದ್ದರು.


ಶಾ ಶನಿವಾರ ಮತ್ತು ರವಿವಾರ ತನ್ನ ನಿವಾಸದಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಮತ್ತು ಇತರ ಕೆಲವು ರಾಜ್ಯಗಳ ಸಂಸದರನ್ನು ಭೇಟಿಯಾಗಿದ್ದರು. ವಾರಾಂತ್ಯದಲ್ಲಿ ಸುಮಾರು 30 ಸಂಸದರು ಮತ್ತು ಕೆಲವು ಸಚಿವರು ಶಾ ಅವರನ್ನು ಭೇಟಿಯಾಗಿದ್ದರು.

ಕೋವಿಡ್ ಎರಡನೇ ಅಲೆಯ ತೀವ್ರತೆಯು ಕಡಿಮೆಯಾಗುವುದರೊಂದಿಗೆ ರಾಜಕೀಯ ಚಟುವಟಿಕೆಗಳು ಮತ್ತು ಭೌತಿಕ ಸಭೆಗಳು ಪುನರಾರಂಭಗೊಂಡಿವೆ. ಈ ಸಲ ಸಭೆಗಳು ಸಂಸದರ ಕ್ಷೇತ್ರಗಳಲ್ಲಿಯ ಸ್ಥಿತಿ,ಕೋವಿಡ್ ನಿರ್ವಹಣೆ,ಸಾಂಕ್ರಾಮಿಕದ ಸಂದರ್ಭದಲ್ಲಿ ಅವರ ಸಾಧನೆಗಳು ಮತ್ತು ಜನರ ಕುಂದುಕೊರತೆಗಳ ಬಗ್ಗೆ ಗಮನ ಕೇಂದ್ರೀಕರಿಸಿವೆ. ಅಲ್ಲದೆ ಸಾಮಾನ್ಯವಾಗಿ ಯಾವುದೇ ಸಂಪುಟ ಪುನರ್ರಚನೆಯು ಇಂತಹ ಪುನರ್ಪರಿಶೀಲನೆಗಳ ಬಳಿಕವೇ ನಡೆಯುತ್ತವೆ.

ಕೇಂದ್ರದಲ್ಲಿ 28 ಸಚಿವ ಹುದ್ದೆಗಳು ಖಾಲಿಯಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ಸಂಪುಟ ವಿಸ್ತರಣೆಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಹಾಲಿ ಸಂಪುಟದಲ್ಲಿ ಪ್ರಧಾನಿ ಮೋದಿಯವರ ಜೊತೆಗೆ 21 ಸಂಪುಟ ದರ್ಜೆ ಸಚಿವರು,ಸ್ವತಂತ್ರ ಹೊಣೆಗಾರಿಕೆ ಹೊಂದಿರುವ 9 ರಾಜ್ಯ ಸಚಿವರು ಮತ್ತು 23 ರಾಜ್ಯ ಸಚಿವರು ಇದ್ದಾರೆ.

ಸಂಪುಟ ವಿಸ್ತರಣೆಯು ಮಿತ್ರಪಕ್ಷಗಳಲ್ಲಿಯ ರಾಜಕೀಯ ಉದ್ವಿಗ್ನತೆಗಳನ್ನು ಶಮನಗೊಳಿಸುವ ಮತ್ತು ಕಳೆದೆರಡು ವರ್ಷಗಳಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದಿರುವ ರಾಜ್ಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ನಿರೀಕ್ಷೆಯಿದೆ.

ಬಿಹಾರದಿಂದ ಜೆಡಿಯು ಸಚಿವ ಸ್ಥಾನವನ್ನು ನಿರೀಕ್ಷಿಸುತ್ತಿದ್ದರೆ, ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದಿಂದ ತೆರವಾಗಿರುವ ಸಚಿವ ಸ್ಥಾನ ಎಲ್ಜೆಪಿಗೆ ದೊರೆಯಬೇಕಿದೆ.

 ಜ್ಯೋತಿರಾದಿತ್ಯ ಸಿಂದಿಯಾ ಅವರು ನಿಷ್ಠೆ ಬದಲಾಯಿಸಿದ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿರುವ ಮಧ್ಯಪ್ರದೇಶಕ್ಕೂ ಸಚಿವ ಸ್ಥಾನಗಳ ಪುರಸ್ಕಾರ ದೊರೆಯುವ ನಿರೀಕ್ಷೆಯಿದೆ. ಸಿಂದಿಯಾ ಅವರನ್ನು ಈಗಾಗಲೇ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿದೆಯಾದರೂ,‌ ಅವರಿಗೆ ಕೇಂದ್ರ ಸಂಪುಟ ಸ್ಥಾನ ದೊರೆಯುವ ಊಹಾಪೋಹಗಳು ಕೇಳಿಬರುತ್ತಿವೆ. ‌

ಪ.ಬಂಗಾಳದಲ್ಲಿ ಬಿಜೆಪಿ ಸೋಲನ್ನಪ್ಪಿದೆಯಾದರೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು ಸಂಪುಟದಲ್ಲಿ ಸ್ಥಾನ ಪಡೆಯುವ ವದಂತಿಗಳಿವೆ. ಸಂಪುಟ ವಿಸ್ತರಣೆ ನಡೆದಾಗ ರಾಜ್ಯವು ಬಿಜೆಪಿಯ ಆದ್ಯತಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂಬ ಸಂದೇಶವನ್ನು ರವಾನಿಸಲು ಪ.ಬಂಗಾಳಕ್ಕೆ ಪ್ರಾತಿನಿಧ್ಯ ನೀಡಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News