ಕೊವ್ಯಾಕ್ಸಿನ್ ಲಸಿಕೆಯ ಡೋಸ್ ಗೆ 150 ರೂ. ದರ ನಿಗದಿಗೆ ಭಾರತ್ ಬಯೊಟೆಕ್ ಅಸಮಾಧಾನ

Update: 2021-06-15 17:50 GMT

ಹೈದರಾಬಾದ್, ಜೂ.16: ಕೊರೋನ ಸೋಂಕಿನ ವಿರುದ್ಧದ ಲಸಿಕೆ ಕೊವ್ಯಾಕ್ಸಿನ್ ನ ಪ್ರತೀ ಡೋಸ್ ಗೆ ಕೇಂದ್ರ ಸರಕಾರ 150 ರೂ. ದರವನ್ನು ನಿಗದಿಗೊಳಿಸಿದೆ. ಆದರೆ ಈ ದರದಲ್ಲಿ ಸುದೀರ್ಘಾವಧಿಗೆ ಲಸಿಕೆ ಪೂರೈಸಲು ಸಾಧ್ಯವಾಗದು ಎಂದು ಲಸಿಕೆ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್ ಹೇಳಿದೆ. 

ಕೇಂದ್ರ ನಿಗದಿಗೊಳಿಸಿದ ದರದಿಂದಾಗಿ ಖಾಸಗಿ ಕ್ಷೇತ್ರಕ್ಕೆ ಅಧಿಕ ದರದಲ್ಲಿ ಲಸಿಕೆ ಪೂರೈಸಬೇಕಾಗುತ್ತದೆ ಎಂದು ಸಂಸ್ಥೆ ಹೇಳಿದೆ. ಲಸಿಕೆಯನ್ನು ಕಡಿಮೆ ಪ್ರಮಾಣದಲ್ಲಿ ಪಡೆಯುವುದರಿಂದ ಪೂರೈಕೆ ವೆಚ್ಚ ಹೆಚ್ಚುತ್ತದೆ. ಜೊತೆಗೆ ಬಿಡಿ ಮಾರಾಟಗಾರರ ಲಾಭಾಂಶ ಮತ್ತಿತರ ವೆಚ್ಚದಿಂದ ಲಸಿಕೆಯ ದರವೂ ಹೆಚ್ಚುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ. ಈ ಮೂಲಕ ಇತರ ಲಸಿಕೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಕೊವ್ಯಾಕ್ಸಿನ್ ಲಸಿಕೆಯ ದರ ಅಧಿಕವಿರುವುದನ್ನು ಸಮರ್ಥಿಸಿಕೊಂಡಿದೆ. 

ಕೇಂದ್ರ ಸರಕಾರಕ್ಕೆ ಸ್ಪರ್ಧಾತ್ಮಕವಲ್ಲದ ದರದಲ್ಲಿ ಲಸಿಕೆ ಒದಗಿಸಲಾಗುತ್ತಿದೆ. ಆದರೆ ಸುದೀರ್ಘಾವಧಿಗೆ ಇದು ಖಂಡಿತಾ ಸಾಧ್ಯವಾಗದು. ಕೇಂದ್ರಕ್ಕೆ ಕಡಿಮೆ ದರದಲ್ಲಿ ಪೂರೈಸುವುದರಿಂದ ಉಂಟಾಗುತ್ತಿರುವ ನಷ್ಟವನ್ನು ಖಾಸಗಿಯವರಿಂದ ಸರಿದೂಗಿಸಬೇಕಾಗುತ್ತದೆ. ಲಸಿಕೆ ಅಭಿವೃದ್ಧಿ, ವೈದ್ಯಕೀಯ ಪ್ರಯೋಗ, ಲಸಿಕೆಯ ಉತ್ಪಾದನಾ ಘಟಕ ಸ್ಥಾಪನೆ ಮತ್ತಿತರ ಪ್ರಕ್ರಿಯೆಗೆ ಸಂಸ್ಥೆ 500 ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡಿದೆ ಎಂದು ಸಂಸ್ಥೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News