ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ವಿರುದ್ಧ ಶಾಂತಿ ಭಂಗ ಆರೋಪ ಕೈಬಿಟ್ಟ ನ್ಯಾಯಾಲಯ

Update: 2021-06-16 06:46 GMT
photo: twitter

ಆಗ್ರಾ: ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಸೇರಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ನಾಲ್ವರು ಕಾರ್ಯಕರ್ತರು ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೋಗುವಾಗ ಬಂಧನಕ್ಕೊಳಗಾದ ಎಂಟು ತಿಂಗಳ ನಂತರ ನಾಲ್ವರ ವಿರುದ್ಧದ “ಶಾಂತಿ ಭಂಗ” ಆರೋಪವನ್ನು ಮಥುರಾ ನ್ಯಾಯಾಲಯ ಕೈಬಿಟ್ಟಿದೆ ಎಂದು Times of India ವರದಿ ಮಾಡಿದೆ

ದೇಶದ್ರೋಹ ಹಾಗೂ  ಯುಎಪಿಎ ಅಡಿಯಲ್ಲಿನ  ಇತರ ಆರೋಪಗಳು ಈಗಲೂ ಚಾಲ್ತಿಯಲ್ಲಿವೆ.  ಇವರ ವಿರುದ್ಧ ಭಾರತೀಯ ದಂಡ ಸಂಹಿತೆ, ಯುಎಪಿಎ ಹಾಗೂ ಐಟಿ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ನಾಲ್ವರು ಹತ್ರಾಸ್‌ನಲ್ಲಿ “ಶಾಂತಿ ಭಂಗ”ಮಾಡಲು ಉದ್ದೇಶಿಸಿದ್ದರು ಎಂದು ಪೊಲೀಸರು ಹೇಳಿದ್ದರು. ಆದರೆ ಆರೋಪಗಳನ್ನು ದೃಢಪಡಿಸಲು ಪೊಲೀಸರು ಯಾವುದೇ ಪುರಾವೆಗಳನ್ನು ಒದಗಿಸಿರಲಿಲ್ಲ.

ಮಂಗಳವಾರ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ರಾಮ್‌ ದತ್ ರಾಮ್ ಅವರು  ನೀಡಿರುವ ಆದೇಶದಲ್ಲಿ, “ಸಿಆರ್‌ಪಿಸಿಯ ಸೆಕ್ಷನ್ 116 (6) ರ ಅಡಿಯಲ್ಲಿ ಶಾಂತಿ ಭಂಗ  ಆರೋಪಗಳನ್ನು ಕೈಬಿಡಲಾಗಿದೆ ಹಾಗೂ  ಆರೋಪಿಗಳನ್ನು ಈ ವಿಷಯದಿಂದ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದರು.

 "ಪ್ರಕರಣ ಆರಂಭವಾದ ಆರು ತಿಂಗಳೊಳಗೆ ಶಾಂತಿ ಭಂಗ ಆರೋಪಗಳನ್ನು ದೃಡೀಕರಿಸಲು ಪೊಲೀಸರಿಗೆ ಪುರಾವೆಗಳನ್ನು ಒದಗಿಸಲು ಸಾಧ್ಯವಾಗಿಲ್ಲ" ಎಂದು ನಾಲ್ವರು ಆರೋಪಿಗಳ ಪರ ವಕೀಲರು ಹೇಳಿದರು.

2020 ರ ಅಕ್ಟೋಬರ್ 5 ರಂದು ಮಾನ್ ಪೊಲೀಸರು ಸಿಆರ್‌ಪಿಸಿ  ಸೆಕ್ಷನ್ 151, 107, 116 ಅಡಿಯಲ್ಲಿ ಬಂಧಿಸಿರುವ ಆರೋಪಿಗಳಾದ ಅತಿಕುರ್ ರಹ್ಮಾನ್, ಆಲಂ, ಪತ್ರಕರ್ತ ಸಿದ್ದೀಕ್ ಕಪ್ಪನ್ ಹಾಗೂ  ಮಸೂದ್ ಅವರನ್ನು ಮಾನ್  ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ , ರಾಮ್ ದತ್ ರಾಮ್ ಮಂಗಳವಾರ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಗಳ ಪರ ವಕೀಲರಾದ  ಮಧುಬನ್ ದತ್ ಚತುರ್ವೇದಿ ತಿಳಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಗೀಡಾಗಿದ್ದ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ಹಾದಿಯಲ್ಲಿ ಕಪ್ಪನ್ ಸಹಿತ  ನಾಲ್ವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News