ಲಂಚ ಪ್ರಕರಣದಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ವಿರುದ್ಧ ಕೇಸ್ ದಾಖಲಿಸಲು ನ್ಯಾಯಾಲಯ ಆದೇಶ
ತಿರುವನಂತಪುರಂ: ಲಂಚ ಸೇರಿದಂತೆ ವಿವಿಧ ಆರೋಪಗಳ ಮೇಲೆ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಮತ್ತು ಜನಾಧಿಪತ್ಯ ರಾಷ್ಟ್ರೀಯ ಸಭಾ ಮುಖ್ಯಸ್ಥೆ ಸಿ.ಕೆ ಜಾನು ವಿರುದ್ಧ ಪ್ರಕರಣ ದಾಖಲಿಸುವಂತೆ ವಯನಾಡ್ ನ್ಯಾಯಾಲಯ ಬುಧವಾರ ಪೊಲೀಸರಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಎಪ್ರಿಲ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಎನ್ಡಿಎಗೆ ಮರಳಲು ಸಿ,ಕೆ ಜಾನುವಿಗೆ ಸುರೇಂದ್ರನ್ 10 ಲಕ್ಷ ರೂ.ಗಳನ್ನು ಪಾವತಿಸಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ವಿದ್ಯಾರ್ಥಿ ವಿಭಾಗವಾದ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್‌ನ ರಾಜ್ಯಾಧ್ಯಕ್ಷ ಪಿ.ಕೆ ನವಾಸ್ ವಯನಾಡ್ ನ ಕಲ್ಪೆಟ್ಟಾದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಈ ಹಿಂದೆ ಅರ್ಜಿದಾರರು ಸುರೇಂದ್ರನ್ ಮತ್ತು ಜಾನು ವಿರುದ್ಧ ಪ್ರಕರಣ ದಾಖಲಿಸಬೇಕೆಂದು ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಸಂಪರ್ಕಿಸಿದ್ದರು. ಯಾವುದೇ ಪ್ರಕರಣ ದಾಖಲಾಗದ ಕಾರಣ ಅವರು ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ತಿಂಗಳ ಆರಂಭದಲ್ಲಿ ಜೆಆರ್ ಎಸ್ ರಾಜ್ಯ ಖಜಾಂಚಿ ಪ್ರಸೀತಾ ಅಝಿಕ್ಕೋಡ್, "ಚುನಾವಣೆಗೆ ಮುನ್ನ ಎನ್ಡಿಎಗೆ ಮರಳಲು ಜಾನು ಸುರೇಂದ್ರನ್ ರಿಂದ 10 ಕೋಟಿ ರೂ.ಗಳ ಬೇಡಿಕೆಯಿಟ್ಟಿದ್ದರು. ಕೊನೆಗೆ 10 ಲಕ್ಷ ರೂ.ಗಳನ್ನು ನೀಡಲಾಗಿತ್ತು ಎಂದು ಆರೋಪಿಸಿದ್ದರು. ಬಳಿಕ ಜಾನು ವಯನಾಡ್ ನ ಸುಲ್ತಾನ್ ಬತ್ತೇರಿಯಿಂದ ಸ್ಫರ್ಧಿಸಿದ್ದು, ಅಲ್ಲಿ ಅವರು ಸೋಲು ಕಂಡಿದ್ದರು.
ಈ ಒಪ್ಪಂದವನ್ನು ಉಲ್ಲೇಖಿಸುವ ಸುರೇಂದ್ರನ್ ಮತ್ತು ಸಿಕೆ ಜಾನುರದ್ದೆನ್ನಲಾದ ಆಡಿಯೋ ಕ್ಲಿಪ್ ಅನ್ನೂ ಬಿಡುಗಡೆ ಮಾಡಲಾಗಿತ್ತು. ಈ ಆರೋಪವನ್ನು ಸುರೇಂದ್ರನ್ ಮತ್ತು ಜಾನು ನಿರಾಕರಿಸಿದ್ದರು. ಈ ವೇಳೆ ಮತ್ತಷ್ಟು ಆಡಿಯೋ ಕ್ಲಿಪ್ ಗಳನ್ನು ಬಿಡುಗಡೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.