ತ್ರಿಪುರಾದಲ್ಲಿ ಬಿಜೆಪಿ ಶಾಸಕರು ಟಿಎಂಸಿ ಸೇರಲಿದ್ದಾರೆಂಬ ವದಂತಿ; ರಾಜ್ಯಕ್ಕೆ ಧಾವಿಸಿರುವ ಹಿರಿಯ ನಾಯಕರು
ಅಗರ್ತಲಾ: ತ್ರಿಪುರಾದ ಕೆಲ ಬಿಜೆಪಿ ಶಾಸಕರುಗಳು ಟಿಎಂಸಿ ಸೇರಲಿದ್ದಾರೆಂದು ಹರಡಿರುವ ಊಹಾಪೋಹಗಳ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರು ಅಗರ್ತಲಾದಲ್ಲಿ ಸಭೆ ಸೇರಿದ್ದಾರೆ. ಈ ನಡುವೆ ಪ್ರತಿಕ್ರಿಯಿಸಿರುವ ತ್ರಿಪುರಾ ರಾಜ್ಯ ಬಿಜೆಪಿ ಅಧ್ಯಕ್ಷ ಡಾ ಮಾಣಿಕ್ ಸಹಾ, ಬಿಜೆಪಿ ಕುಟುಂಬದಲ್ಲಿ ಎಲ್ಲವೂ ಸರಿಯಾಗಿದೆ, ಭಿನ್ನಾಭಿಪ್ರಾಯಗಳೇನಿದ್ದರೂ ಮಾತುಕತೆಗಳ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ತ್ರಿಪುರಾದ ಬಿಜೆಪಿ ಸಂಘಟನಾ ಉಸ್ತುವಾರಿ ಫಣೀಂದ್ರ ನಾಥ್ ಶರ್ಮ ಸಹಿತ ಹಲವು ಹಿರಿಯ ನಾಯಕರು ರಾಜ್ಯ ನಾಯಕತ್ವದ ಜತೆ ಸಭೆ ನಡೆಸಿದ್ದಾರೆ.
ರಾಜ್ಯದ ʼಅಸಂತುಷ್ಟ' ಬಿಜೆಪಿ ಶಾಸಕರ ಒಂದು ಗುಂಪು ಮರಳಿ ತೃಣಮೂಲ ಕಾಂಗ್ರೆಸ್ ಸೇರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವದಂತಿಗಳ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ. ರಾಜ್ಯದ ಮಾಜಿ ಆರೋಗ್ಯ ಸಚಿವ ಹಾಗೂ ಶಾಸಕ ಸುದೀಪ್ ರಾಯ್ ಬರ್ಮನ್ 2017ರಲ್ಲಿ ಟಿಎಂಸಿ ತೊರೆದು ಇತರ ಕೆಲವರೊಂದಿಗೆ ಬಿಜೆಪಿ ಸೇರಿದ್ದರು. ಬರ್ಮನ್ ಸಹಿತ ಕೆಲವರು ಮತ್ತೆ ಟಿಎಂಸಿ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಬರ್ಮನ್ ಸಹಿತ ಟಿಎಂಸಿಗೆ ವಲಸೆ ಬಂದ ಕೆಲವರು ಕಳೆದ ವರ್ಷ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು. ಬಿಪ್ಲಬ್ ಕುಮಾರ್ ದೇಬ್ ಅವರನ್ನು ಸೀಎಂ ಹುದ್ದೆಯಿಂದ ಕೆಳಗಿಳಿಸುವ ಉದ್ದೇಶದಿಂದ ಅವರು ನಡ್ಡಾ ಅವರನ್ನು ಭೇಟಿಯಾಗಿದ್ದರೆಂದು ಹೇಳಲಾಗಿದ್ದರೂ ಭೇಟಿಯಾದವರು ಮಾತ್ರ ತಾವು ಪಕ್ಷ ಸಂಘಟನಾ ವಿಚಾರಗಳನ್ನು ಚರ್ಚಿಸಿದ್ದಾಗಿ ಹೇಳಿಕೊಂಡಿದ್ದರು.
ರಾಜ್ಯಕ್ಕೆ ಬುಧವಾರ ಭೇಟಿ ನೀಡಿರುವ ಹಿರಿಯ ನಾಯಕರುಗಳು ಎಲ್ಲಾ ಸಚಿವರು ಹಾಗೂ ಶಾಸಕರನ್ನು ವೈಯಕ್ತಿಕವಾಗಿ ಕಂಡು ಚರ್ಚಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಡಾ ಮಾಣಿಕ್ ಸಹಾ ಹೇಳಿದ್ದಾರೆ. "ಎಲ್ಲಾ ಶಾಸಕರು ನಮ್ಮ ಜತೆಗಿದ್ದಾರೆ. ಕುಟುಂಬದಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳಿರಬಹುದು ಅವುಗಳನ್ನು ಇತ್ಯರ್ಥಪಡಿಸಲಾಗುವುದು" ಎಂದು ಅವರು ಹೇಳಿದ್ದಾರೆ. ಕೆಲ ಶಾಸಕರು ತೃಣಮೂಲ ಕಾಂಗ್ರೆಸ್ ಸೇರಲಿದ್ದಾರೆಂಬುದು ಕೇವಲ ವದಂತಿಗಳು ಎಂದು ಅವರು ಹೇಳಿದ್ದಾರೆ.