ವಿಜ್ಞಾನಿಗಳ ಬೆಂಬಲವಿಲ್ಲದೇ ಕೋವಿಶೀಲ್ಡ್‌ ಎರಡು ಡೋಸ್‌ ಗಳ ನಡುವೆ ಅಂತರ ಹೆಚ್ಚಿಸಿದ್ದ ಕೇಂದ್ರಸರಕಾರ: ರಾಯ್ಟರ್ಸ್ ವರದಿ

Update: 2021-06-17 11:30 GMT

ಹೊಸದಿಲ್ಲಿ: ಮೇ 13ರಂದು ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ "ತಜ್ಞರ ಸಲಹೆ" ಯಂತೆ ಏರಿಸಲಾಗಿದೆ ಎಂದು ಹೇಳಿತ್ತು.

ಆದರೆ ವಾಸ್ತವವಾಗಿ ತಜ್ಞರ ಒಪ್ಪಿಗೆಯಿಲ್ಲದೆಯೇ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಲಸಿಕಾ ಕಾರ್ಯಕ್ರಮದ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡದ (ಎನ್‍ಟಿಎಜಿಐ) ಮೂವರು ಸದಸ್ಯರು ಬಹಿರಂಗಪಡಿಸಿದ್ದಾರೆಂದು Reuters.com ವರದಿ ಮಾಡಿದೆ.

ದೇಶಾದ್ಯಂತ ಕೋವಿಡ್ ಪ್ರಕರಣಗಳ ಏರಿಕೆ ನಡುವೆ ಲಸಿಕೆಗಳ ಕೊರತೆ ಎದುರಾದಾಗ ಮೇ 13ರಂದು ಕೇಂದ್ರ ಸರಕಾರ ತನ್ನ ಮೇಲಿನ ನಿರ್ಧಾರ ಪ್ರಕಟಿಸಿತ್ತಲ್ಲದೆ ಎರಡು ಡೋಸ್ ನಡುವಿನ ಅಂತರ ಏರಿಸಲು ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ ಪ್ರಮುಖವಾಗಿ ಬ್ರಿಟನ್ ಅನುಭವವನ್ನು ಗಣನೆಗೆ ತೆಗೆದುಕೊಂಡು ಶಿಫಾರಸು ಮಾಡಿತ್ತು  ಎಂದು ಹೇಳಿತ್ತು. ಈ ತಜ್ಞ ಸಮಿತಿಯ 14 ಪ್ರಮುಖ ಸದಸ್ಯರ ಪೈಕಿ ಮೂವರು ವಿಜ್ಞಾನಿಗಳು ಮಾತ್ರ ಇಂತಹ ಒಂದು ಶಿಫಾರಸು ಮಾಡಲು ಸಾಕಷ್ಟು ದತ್ತಾಂಶವಿರಲಿಲ್ಲ ಎಂದಿದ್ದಾರೆ‌ ಎಂದು ವರದಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಸಲಹೆಯಂತೆ ಎರಡು ಡೋಸ್‍ಗಳ ನಡುವಿನ ಅಂತರವನ್ನು 8-12 ವಾರಗಳಿಗೆ ಹೆಚ್ಚಿಸುವುದಕ್ಕೆ ಎನ್‍ಟಿಎಜಿಐ ಬೆಂಬಲಿಸಿತ್ತು ಆದರೆ 12 ವಾರಗಳಿಗಿಂತ ಹೆಚ್ಚು ಅಂತರ ಹೊಂದಿರಲು ಸೂಕ್ತ ದತ್ತಾಂಶವಿರಲಿಲ್ಲ ಎಂದು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಎಪಿಡೆಮಿಯೊಲಜಿ ಇದರ ಮಾಜಿ ನಿರ್ದೇಶಕ ಎಂ ಡಿ ಗುಪ್ತೆ ಹೇಳಿದ್ದಾರೆ.

ಎನ್‍ಟಿಎಜಿಐಯಲ್ಲಿರುವ ಅವರ ಸಹೋದ್ಯೋಗಿ ಮ್ಯಾಥ್ಯೂ ವರ್ಗೀಸ್ ಕೂಡ ಇದೇ ಮಾತುಗಳನ್ನು ಹೇಳುತ್ತಾರೆ.

ಆದರೆ ಆರೋಗ್ಯ ಸಚಿವಾಲಯ ಮಾತ್ರ ತನ್ನ ನಿರ್ಧಾರಕ್ಕೆ ಸಮಿತಿಯ ಸದಸ್ಯರ್ಯಾರೂ ಅಸಮ್ಮತಿ ಸೂಚಿಸಿರಲಿಲ್ಲ ಎಂದು ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News