ಮ್ಯಾನ್ಮಾರ್ ಗ್ರಾಮಕ್ಕೆ ಸೇನೆಯಿಂದಲೇ ಬೆಂಕಿ ; ಇಬ್ಬರು ಸಜೀವ ದಹನ ಎಂದು ಆರೋಪಿಸಿದ ಗ್ರಾಮಸ್ಥರು

Update: 2021-06-17 16:25 GMT
ಸಾಂದರ್ಭಿಕ ಚಿತ್ರ

ಯಾಂಗಾನ್, ಜೂ.17: ಪ್ರತಿಭಟನಾಕಾರರ ವಿರುದ್ಧ ನಡೆಸಿದ ಕಾರ್ಯಾಚರಣೆ ಸಂದರ್ಭ ಮ್ಯಾನ್ಮಾರ್ ನ ಸೇನೆ ಮ್ಯಾಗ್ವೆ ಪ್ರದೇಶದ ಕಿನ್ಮಾ ಎಂಬ ಗ್ರಾಮಕ್ಕೆ ಬೆಂಕಿಹಚ್ಚಿದ್ದು ಇಬ್ಬರು ವೃದ್ಧರು ಸಜೀವ ದಹನವಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಫೆಬ್ರವರಿ 1ರಂದು ಸೇನೆ ನಡೆಸಿದ ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಸೇನೆ ಹಿಂಸಾಚಾರ ನಡೆಸುತ್ತಿದೆ ಎಂಬ ವರದಿಗಳ ಮಧ್ಯೆಯೇ ಗುರುವಾರ ಸಗಾಯಿಂಗ್ ವಲಯದ ಹಕಾಂತ್ ಉಪನಗರ, ಕಚಿನ್ ರಾಜ್ಯ ಮತ್ತು ತನಿಂಥರಿ ವಲಯದ ದವೈ ನಗರದಲ್ಲಿ ನೂರಾರು ಪ್ರತಿಭಟನಾಕಾರರು ಮೋಟಾರ್ ಸೈಕಲ್ನಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. 

ಕಿನ್ಮಾ ಗ್ರಾಮದಲ್ಲಿ ಮಂಗಳವಾರ ವರದಿಯಾದ ಬೆಂಕಿ ಅನಾಹುತಕ್ಕೆ ಭಯೋತ್ಪಾದಕರು ಕಾರಣ ಎಂದು ಸರಕಾರಿ ಪ್ರಾಯೋಜಿತ ಎಂಆರ್ಟಿವಿ ಹೇಳಿದೆ. ಅಲ್ಲದೆ, ಈ ಅನಾಹುತಕ್ಕೆ ಬೇರೆ ಕಾರಣವನ್ನು ವರದಿ ಮಾಡಿರುವ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಸೇನೆಗೆ ಕೆಟ್ಟ ಹೆಸರು ತರಲು ಷಡ್ಯಂತ್ರ ಹೂಡಿದೆ ಎಂದು ಪ್ರತಿಪಾದಿಸಿದೆ. ಗ್ರಾಮಕ್ಕೆ ಬೆಂಕಿ ಬೀಳಲು ಕಾರಣವೇನು ಎಂಬುದನ್ನು ಸ್ವಯಂ ದೃಢೀಕರಿಸಲು ಸಾಧ್ಯವಾಗಲಿಲ್ಲ ಎಂದು ‘ದಿ ರಾಯ್ಟರ್ಸ್’ ಸುದ್ಧಿಸಂಸ್ಥೆ ಹೇಳಿದೆ. 

ಸುಮಾರು 800 ಜನರಿರುವ ಕಿನ್ಮಾ ಗ್ರಾಮದಲ್ಲಿ ಮಂಗಳವಾರದ ಬೆಂಕಿ ಅನಾಹುತದ ಬಳಿಕ ಸುಮಾರು 200 ಮನೆಗಳು ಸುಟ್ಟು ಕರಕಲಾಗಿದ್ದು ಕೇವಲ 30 ಮನೆಗಳು ಮಾತ್ರ ಉಳಿದುಕೊಂಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿರುವುದಾಗಿ ಎಂದು ‘ದಿ ರಾಯ್ಟರ್ಸ್’ ವರದಿಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News