×
Ad

ಲಕ್ಷದ್ವೀಪ ಆಡಳಿತದ ಕರಡು ನಿಯಮಗಳನ್ನು ತಡೆಯಬೇಕೆಂಬ ಅರ್ಜಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್

Update: 2021-06-18 13:32 IST

ತಿರುವನಂತಪುರಂ: ಲಕ್ಷದ್ವೀಪದ ಆಡಳಿತವು ಜಾರಿಗೊಳಿಸಲುದ್ದೇಶಿಸಿರುವ ಹಲವು ವಿವಾದಾತ್ಮಕ ನಿಯಮಗಳು ಹಾಗೂ ಕಾನೂನುಗಳ ಜಾರಿಗೆ ತಡೆ ಹೇರಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಅಪೀಲನ್ನು ಕೇರಳ ಹೈಕೋರ್ಟ್ ತಳ್ಳಿ ಹಾಕಿದೆ.

ಲಕ್ಷದ್ವೀಪದಲ್ಲಿ ಜಾರಿಗೆ ತರಲುದ್ದೇಶಿಸಲಾಗಿರುವ ನಿಯಮಗಳು ಹಾಗೂ ಕಾನೂನುಗಳು ಆ ದ್ವೀಪದ ಸಾಂಪ್ರದಾಯಿಕ ಜೀವನ ಮತ್ತು ಸಂಸ್ಕøತಿಯನ್ನು ನಾಶಗೈಯ್ಯಲಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕೆ ಪಿ ನೌಷಾದ್ ಆಲಿ ಅವರು ಮೇ 2021ರಲ್ಲಿ ಕೇರಳ ಹೈಕೋರ್ಟಿಗೆ ಸಲ್ಲಿಸಿದ್ದ ಅಪೀಲಿನಲ್ಲಿ ತಿಳಿಸಿದ್ದರು. ಲಕ್ಷದ್ವೀಪ ನಿವಾಸಿಗಳಿಂದ ಇನ್ನಷ್ಟು ಆಕ್ಷೇಪಣೆಗಳನ್ನು ಆಹ್ವಾನಿಸದ ಹೊರತು ಕರಡು ನಿಯಮಗಳನ್ನು ಜಾರಿಗೆ ತರಬಾರದೆಂದೂ ಅಪೀಲಿನಲ್ಲಿ ಕೋರಲಾಗಿತ್ತು.

ಲಕ್ಷದ್ವೀಪದಲ್ಲಿ ಪ್ರಸ್ತಾಪಿಸಲಾಗಿರುವ 'ಬೀಫ್ ನಿಷೇಧ' ಮತ್ತಿತರ ನಿಯಮಾವಳಿಗಳು ಆಡಳಿತಾತ್ಮಕ ವಿಚಾರಗಳು ಎಂದು ಹೇಳಿ ಈ ಹಿಂದೆ ನ್ಯಾಯಾಲಯ ಅವುಗಳಿಗೆ ತಡೆಹೇರಲು ನಿರಾಕರಿಸಿತ್ತು.

ಗುರುವಾರದ ವಿಚಾರಣೆ ವೇಳೆ ಕೇಂದ್ರ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ತಮ್ಮ ವಾದ ಮಂಡಿಸುತ್ತಾ ಅಪೀಲುದಾರರು ಲಕ್ಷದ್ವೀಪದ ನಾಗರಿಕರಲ್ಲ  ಹಾಗೂ ಈ ಅಪೀಲು ಪಿಐಎಲ್  ದುರುಪಯೋಗಪಡಿಸುತ್ತಿದೆ ಎಂದು ಆರೋಪಿಸಿದರು. ಅವರು ತಮ್ಮ ಅಪೀಲಿನಲ್ಲಿ ಉಲ್ಲೇಖಿಸಿರುವುದು ಕೇವಲ ಕರಡುಗಳು ಹಾಗೂ ಅವುಗಳನ್ನು ಇನ್ನೂ ಜಾರಿಗಾಗಿ ಅನುಮೋದಿಸಲಾಗಿಲ್ಲ, ಜನರ ಆಕ್ಷೇಪಣೆಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗಳು ಕರಡುಗಳಿಗೆ ಅನುಮತಿ ನೀಡುವ ಮುನ್ನ ಅವರಿಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ಅಪೀಲುದಾರರು ಮಲಪ್ಪುರಂನವರಾಗಿರುವುದು ಹಾಗೂ  ಲಕ್ಷದ್ವೀಪಕ್ಕೆ ಕೇವಲ ತಮ್ಮ ಸಾಮಾಜಿಕ  ಕಾರ್ಯಗಳಿಗಾಗಿ ತೆರಳುತ್ತಿರುವುದು ಅವರ ಅಪೀಲನ್ನು ದುರ್ಬಲವಾಗಿಸಿದೆ, ಹಾಗೂ ಪಿಐಎಲ್‍ಗಳ ಮೂಲಕ ವಸ್ತುಶಃ ಆಡಳಿತ ಬಯಸುವ ಈ ಅಪೀಲಿಗಾಗಿ ಅಪೀಲುದಾರರ ಮೇಲೆ ದಂಡ ಹೇರಬೇಕೇ ಎಂದು ನ್ಯಾಯಾಲಯ ಅವರನ್ನು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News