ಚೀನಾ ಬೆಂಬಲಿತ ಕೊಲಂಬೊ ಬಂದರು ಯೋಜನೆಗೆ ಭಾರತದ ಆಕ್ಷೇಪ

Update: 2021-06-18 16:34 GMT

ಕೊಲಂಬೊ,ಜೂ.20: ಚೀನಾದ ನೆರವಿನೊಂದಿಗೆ ಕೊಲಂಬೊ ಬಂದರು ನಗರ ಯೋಜನೆಯನ್ನು ಮುನ್ನಡೆಸಲು ಶ್ರೀಲಂಕಾ ನಿರ್ಧರಿಸಿರುವಂತೆಯೇ, ಭಾರತವು ಗುರುವಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ದ್ವೀಪ ರಾಷ್ಟ್ರವು ಸಾಗರ ಭದ್ರತೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಹೊಸದಿಲ್ಲಿ ಜೊತೆಗೆ ಹೊಂದಿರುವ ಉತ್ಕೃಷ್ಟವಾದ ದ್ವಿಪಕ್ಷೀಯ ಸಹಕಾರದ ಬಗ್ಗೆ ಗಮನ ವಹಿಸಲಿದೆ ಎಂಬುದನ್ನು ತಾನು ನಿರೀಕ್ಷಿಸುವುದಾಗಿ ತಿಳಿಸಿದೆ.

ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಅವರು ಗುರುವಾರ ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳನ್ನು ಭಾರತವು ಭದ್ರತಾ ಗ್ರಹಿಕೆಯೊಂದಿಗೆ ನಿಕಟವಾಗಿ ಗಮನಿಸುತ್ತಿದೆ ಎಂದರು.

ಕೊಲಂಬೊ ಬಂದರು ನಗರ ಯೋಜನೆಯ ಕಾರ್ಯಚೌಕಟ್ಟಿನ ಹಲವಾರು ಅಂಶಗಳ ಬಗ್ಗೆ ತನ್ನ ಕಳವಳವನ್ನು ಭಾರತವು ಶ್ರೀಲಂಕಾ ಮುಂದೆ ವ್ಯಕ್ತಪಡಿಸಿದೆಯೆಂದು ಅವರು ಹೇಳಿದರು.
        
ಶ್ರೀಲಂಕಾ ಸಂಸತ್ ಕೊಲಂಬೊ ಬಂದರು ನಗರ ಆರ್ಥಿಕ ಆಯೋಗ ವಿಧೇಯಕಕ್ಕೆ ಅನುಮೋದನೆ ನೀಡಿದ ಕೆಲವು ವಾರಗಳ ಬಳಿಕ ಆರಿಂದಮ್ ಹೀಗೆ ಪ್ರತಿಕ್ರಿಯಿಸಿದ್ದಾರೆ. ಚೀನಾ ಬೆಂಬಲಿತ ಕೊಲಂಬೊ ಬಂದರು ನಗರ ಯೋಜನೆಯು ದ್ವೀಪರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ತಂದುಕೊಡಲಿದೆ ಹಾಗೂ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದು ಶ್ರೀಲಂಕಾ ಸರಕಾರ ಹೇಳಿದೆ.


ಆದರೆ ನೂತನ ವಿಧೇಯಕವು ಶ್ರೀಲಂಕಾದಲ್ಲಿ ಚೀನಿ ವಸಾಹತಿನ ಸೃಷ್ಟಿಗೆ ಕಾರಣವಾಗಲಿದೆ ಎಂದು ಪ್ರತಿಪಕ್ಷಗಳು ಆಪಾದಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News