ಅಸ್ಸಾಂ: ಕಾಂಗ್ರೆಸ್ ಶಾಸಕ ರೂಪ್‌ ಜ್ಯೋತಿ ಕುರ್ಮಿ ರಾಜೀನಾಮೆ

Update: 2021-06-18 17:57 GMT
ಫೋಟೊ ಕೃಪೆ: ANI 

ಗುವಾಹಟಿ, ಜೂ. 18: ಅಸ್ಸಾಂನ ಮರಿಯಾನಿ ವಿಧಾನ ಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೂಪ್‌ ಜ್ಯೋತಿ ಕುರ್ಮಿ ಅವರು ಶುಕ್ರವಾರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಅವರು ಜೂನ್ 21ರಂದು ಬಿಜೆಪಿಗೆ ಸೇರುವ ಸಾಧ್ಯತೆ ಇದೆ. ಅಸ್ಸಾಂ ವಿಧಾನ ಸಭೆ ಸದಸ್ಯತ್ವಕ್ಕೂ ಅವರು ರಾಜೀನಾಮೆ ನೀಡಿದ್ದಾರೆ. ಅವರು ತನ್ನ ರಾಜೀನಾಮೆ ಪತ್ರವನ್ನು ಅಸ್ಸಾಂ ವಿಧಾನ ಸಭೆ ಸ್ಪೀಕರ್ ಬಿಸ್ವಜಿತ್ ಡೈಮರಿ ಅವರಿಗೆ ಕಳುಹಿಸಿದ್ದಾರೆ. ‌

ಈ ನಡುವೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ರೂಪ್ಜ್ಯೋತಿ ಕುರ್ಮಿ ಅವರನ್ನು ಕಾಂಗ್ರೆಸ್ ಉಚ್ಛಾಟಿಸಿದೆ. ಅಸ್ಸಾಂನ ಜೊರ್ಹಾತ್ ಜಿಲ್ಲೆಯ ಮರಿಯಾನಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ರೂಪ್‌ ಜ್ಯೋತಿ ಕುರ್ಮಿ, ತಾನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದೆ. ಆದರೆ, ಪಕ್ಷದ ನಾಯಕತ್ವ ಅನ್ಯಾಯದ ನಿರ್ಧಾರಗಳನ್ನು ತೆಗೆದುಕೊಂಡ ಕಾರಣಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದೆ ಎಂದಿದ್ದಾರೆ. ತನ್ನ ದಾರಿ ಅನುಸರಿಸಿ ಇನ್ನೂ ಕೆಲವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಕೂಡ ಅವರು ಹೇಳಿದರು. 

ರಾಹುಲ್ ಗಾಂಧಿ ಅವರಿಗೆ ಪಕ್ಷ ಮುನ್ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ಅವರಿಗೆ ಪಕ್ಷದ ಚುಕ್ಕಾಣಿ ನೀಡಿದರೆ, ಪಕ್ಷ ಮುಂದೆ ಸಾಗಲಾರದು ಎಂದು ರೂಪ್‌ ಜ್ಯೋತಿ ಕುರ್ಮಿ ಪ್ರತಿಪಾದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News