ಸೈಕಲ್ ಫ್ಯಾಕ್ಟರಿಯಲ್ಲಿ ದುಡಿಯುತ್ತಲೇ ಹಾಕಿ ಕಲಿತ ನೇಹಾ ಈಗ ಒಲಿಂಪಿಕ್ ತಾರೆ!

Update: 2021-06-18 18:24 GMT
photo: twitter/@OpalIndiaIn

 ಹೊಸದಿಲ್ಲಿ,: ಸುಮಾರು 13 ವರ್ಷಗಳ ಹಿಂದೆ ಸಾವಿತ್ರಿ ದೇವಿ ತನ್ನ ಮೂವರು ಪುತ್ರಿಯರ ಪೈಕಿ ಅತ್ಯಂತ ಕಿರಿಯವಳಾದ ನೇಹಾಳನ್ನು ಹರ್ಯಾಣದ ಸೋನೆಪತ್‌ನಲ್ಲಿರುವ ಹಾಕಿ ಅಕಾಡಮಿಗೆ ಸೇರಿಸಿದ್ದರು. ಮನೆಯಲ್ಲಿನ ವಿಷಕರ ವಾತಾವರಣದಿಂದ ಪಾರಾಗಲು ತನ್ನ ಪುತ್ರಿಗೆ ಇದೊಂದೇ ದಾರಿ ಎಂದು ಆಕೆ ಭಾವಿಸಿದ್ದಳು.

‘‘ನನ್ನ ಪತಿ ಮದ್ಯವ್ಯಸನಿಯಾಗಿದ್ದು ಮನೆಗೆ ಬಂದಾಗಲೆಲ್ಲಾ ಹೊಡೆಯುತ್ತಿದ್ದ, ಹಿಂಸಿಸುತ್ತಿದ್ದ. ನನ್ನ ಕಿರಿಯ ಪುತ್ರಿ ಭೀತಳಾಗಿ ಕಣ್ಣು, ಕಿವಿಗಳನ್ನು ಮುಚ್ಚಿ ಕೊಳ್ಳುತ್ತಿದ್ದಳು ಮತ್ತು ನನ್ನ ಹಿಂದೆ ಬಚ್ಚಿಟ್ಟು ಕೊಳ್ಳುತ್ತಿದ್ದಳು. ಅದು ಬದುಕುವ ದಾರಿಯಲ್ಲವೆಂದು ನನಗೆ ಅರಿವಾಯಿತು. ಆಕೆಗೆ ಮನೆಗಿಂತ ಹಾಕಿ ಮೈದಾನವೇ ಹೆಚ್ಚು ಸುರಕ್ಷಿತವೆಂದು ನನಗೆ ಅರಿವಾಯಿತು ಎಂದು ದೇವಿ ಹೇಳುತ್ತಾರೆ. ಸಾವಿತ್ರಿ ತನ್ನ ಕುಟುಂಬದ ಪೋಷಣೆಗಾಗಿ ಬೇರೆಯವರ ಮನೆಗಳಲ್ಲಿ ಮನೆಗೆಲಸ ಮಾಡುವ ಜೊತೆಗೆ ಸೈಕಲ್ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದರು.

 ಆದರೆ ಇಂದು ಆಕೆಯ ಕಿರಿಯ ಪುತ್ರಿ ನೇಹಾ ಗೋಯಲ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ತಂಡದ ಆಟಗಾರ್ತಿಯಾಗಿ ದೇಶದ ಗಮನಸೆಳೆದಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಮಹಿಳಾ ಹಾಕಿ ತಂಡದ 16 ಸದಸ್ಯರ ಹೆಸರುಗಳನ್ನು ಗುರುವಾರ ಪ್ರಕಟಿಸಲಾಗಿದೆ. ತನ್ನ ತಾಯಿ ಹಾಗೂ ಸೋದರಿಯರ ಜೊತೆ ಸೈಕಲ್ ಫ್ಯಾಕ್ಟರಿಯಲ್ಲಿ ದುಡಿದು ನೇಹಾ 2 ಸಾವಿರ ರೂ. ಸಂಪಾದಿಸುತ್ತಿದ್ದರು. ಕಷ್ಟಕಾರ್ಪಣ್ಯದ ನಡುವೆಯೂ ಧೃತಿಗೆಡದೆ ಛಲದಿಂದ ಹಾಕಿ ಅಭ್ಯಾಸ ಮಾಡುತ್ತಲೇ, ಟೀಮ್‌ಇಂಡಿಯಾದ ಭರವಸೆಯ ಮಿಡ್‌ಫೀಲ್ಡರ್ ಆಟಗಾರ್ತಿಯಾಗಿ ಬೆಳೆದ ನೇಹಾ ಬದುಕು ಒಂದು ರೋಚಕ ಕಥೆಯಾಗಿದೆ.

 ಸಾವಿತ್ರಿ ದೇವಿ ಅವರು ತನ್ನ ಪುತ್ರಿ ನೇಹಾಗೆ ಸೋನೆಪತ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತೆ ಪ್ರೀತಮ್ ಸಿವಾಚ್ ನಡೆಸುತ್ತಿರುವ ಹಾಕಿ ಅಕಾಡಮಿಗೆ ಸೇರಿಸಿದರು. ಸಾಧಾರಣವಾದ ಮೂಲಸೌಕರ್ಯ, ಮಧ್ಯಮಗಾತ್ರದ ಹಾಗೂ ಮಟ್ಟಸವಲ್ಲದ ಮೈದಾನದಲ್ಲಿ ನೇಹಾ ಹಾಕಿ ಅಭ್ಯಾಸ ಮಾಡಬೇಕಾಯಿತು. ನೇಹಾ 11 ವರ್ಷದವಳಾಗಿದ್ದಾಗ ಆಕೆ ಪ್ರತಿದಿನವೂ ಮೈದಾನದಲ್ಲಿ ತಿರುಗಾಡುತ್ತಿದ್ದುದನ್ನು ಕಂಡೆ. ಆಕೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಒಂದು ದಿನ ಆಕೆಗೆ ನಾನು ಸ್ಕಿಪ್ಪಿಂಗ್ ಹಗ್ಗವನ್ನು ನೀಡಿದೆ. ಆಕೆ ಅದರಲ್ಲಿ ತನ್ನ ಕಸುವನ್ನು ಸಾಕಷ್ಟು ಪ್ರದರ್ಶಿಸಿದಳು. ಆಗ ನನಗೆ ಈಕೆಗೆ ಯಾಕೆ ಹಾಕಿ ಕಲಿಸಬಾರದು ಎಂಬ ಯೋಚನೆ ಬಂದಿತ್ತು ಎಂದು 47 ವರ್ಷದ ಸಿವಾಚ್ ನೆನಪಿಸಿಕೊಳ್ಳುತ್ತಾರೆ.

ನೇಹಾಳ ತಾಯಿ ಮನವೊಲಿಸುವಲ್ಲಿ ಸಫಲರಾದ ಸಿವಾಚ್ ಆಕೆಗೆ ಅಕಾಡಮಿಯಲ್ಲಿ ತರಬೇತಿ ಆರಂಭಿಸಿದರು. ನೀನು ಚೆನ್ನಾಗಿ ಆಡಿದಲ್ಲಿ ಪ್ರತಿ ದಿನ ಎರಡು ಹೊತ್ತು ಒಳ್ಳೆಯ ಊಟ ನೀಡುವುದಾಗಿ ನೇಹಾಗೆ ಸಿವಾಚ್ ಭರವಸೆ ನೀಡಿದ್ದರು. ನನ್ನ ಬಾಲ್ಯದ ದಿನಗಳ ಸಂಕಷ್ಟಗಳನ್ನು ನೇಹಾ ಈಗಲೂ ಸ್ಮರಿಸಿಕೊಳ್ಳುತ್ತಾರೆ. ಐದು ಮಂದಿ ವಾಸಿಸುತ್ತಿದ್ದ ಮುರುಕಲು ಮನೆ ನಮ್ಮದು. ಪಕ್ಕದಲ್ಲೇ ಚರಂಡಿ ನೀರು ಹರಿಯುತ್ತಿತ್ತು. ಉದ್ಯೋಗವಿಲ್ಲದ ತಂದೆ ಸದಾ ಕುಡಿದು ತೂರಾಡುತ್ತಾ ಬರುತ್ತಿದ್ದ. ಆಗ ಮನೆಯಲ್ಲಿ ಪರಿಸ್ಥಿತಿ ನಿಯಂತ್ರಣ ಮೀರುತ್ತಿತ್ತು ಎಂದು ಆಕೆ ನೆನಪಿಸಿಕೊಳ್ಳುತ್ತಾಳೆ. ಆದಾಗ್ಯೂ ನೇಹಾ ಸದಾ ಹಸನ್ಮುಖಿಯೆಂದು ಆಕೆಯ ಸಹ ಆಟಗಾರ್ತಿಯರು ಹೇಳುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ ಆಕೆಯ ಮುಖದಲ್ಲಿ ಮಂದಹಾಸ ಮಾಸುವುದಿಲ್ಲ ಎಂದವರು ನೇಹಾಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ.

ಇದೀಗ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ನೇಹಾ ತನ್ನ 18ನೇ ವಯಸ್ಸಿನಲ್ಲಿ ಅಂತರ್‌ರಾಷ್ಟ್ರೀಯ ಹಾಕಿಗೆ ಪ್ರವೇಶ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News